
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ಮೊದಲ ಏಕದಿನ ಪಂದ್ಯ ಇತಿಹಾಸ ಪುಟ ಸೇರಿದೆ. ಹೀಗೆ ಇತಿಹಾಸ ಪುಟ ಸೇರಲು ಮುಖ್ಯ ಕಾರಣ ಸೌತ್ ಆಫ್ರಿಕಾ ತಂಡದ ದಿಟ್ಟ ಹೋರಾಟ. ಅದು ಕೂಡ ಬರೋಬ್ಬರಿ 332 ರನ್ ಗಳಿಸುವ ಮೂಲಕ.

ರಾಂಚಿಯ ಜೆಎಸ್ ಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 135 ರನ್ ಬಾರಿಸಿದ್ದರು. ಈ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 349 ರನ್ ಕಲೆಹಾಕಿತು.

350 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 11 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರ ವಿಕೆಟ್ ಕಳೆದುಕೊಂಡಿತು. ಹೀಗೆ ಆರಂಭಿಕ ಆಘಾತಕ್ಕೆ ಒಳಗಾದರೂ ಸೌತ್ ಆಫ್ರಿಕಾ ಆ ಬಳಿಕ 300+ ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಿದೆ.

ಹೌದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ರನ್ ಚೇಸಿಂಗ್ ವೇಳೆ 15 ರನ್ ಗಳ ಒಳಗೆ 3 ವಿಕೆಟ್ ಕಳೆದುಕೊಂಡು ತಂಡವೊಂದು 300+ ರನ್ ಕಲೆಹಾಕಿದ್ದು ಇದೇ ಮೊದಲು. 11 ರನ್ಗೆ ಮೂರು ವಿಕೆಟ್ ಪತನಗೊಂಡ ಬಳಿಕ ಸೌತ್ ಆಫ್ರಿಕಾ ತಂಡವು ಬರೋಬ್ಬರಿ 321 ರನ್ ಕಲೆಹಾಕಿ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.

ಈ ಮೂಲಕ 54 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೇಸಿಂಗ್ ವೇಳೆ 15 ರನ್ ಗಳ ಒಳಗೆ 3 ವಿಕೆಟ್ ಕಳೆದುಕೊಂಡು 300+ ರನ್ ಕಲೆಹಾಕಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ. ಈ ಮೂಲಕ ಸೋಲಿನ ನಡುವೆಯೂ ಆಫ್ರಿಕಾ ಪಡೆ ಭರ್ಜರಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ.