
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ 4 ಪಂದ್ಯಗಳ ಸರಣಿಯ ಮೊದಲೆರಡು ಮ್ಯಾಚ್ ಗಳು ಮುಗಿದಿವೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿದೆ. ಇದೀಗ ಮೂರನೇ ಪಂದ್ಯಕ್ಕಾಗಿ ಉಭಯ ತಂಡಗಳು ಸೆಂಚುರಿಯನ್ ನಗರಕ್ಕೆ ತೆರಳಿದೆ.

ಬುಧವಾರ ಸೆಂಚುರಿಯನ್ ನಲ್ಲಿನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಹೊಸ ಉಲ್ಲಾಸದೊಂದಿಗೆ ತೆರಳಿದೆ. ಈ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.

ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತೆರಳಲಿದ್ದು, ಹೀಗಾಗಿ ಸೌತ್ ಆಫ್ರಿಕಾ ಸರಣಿಗೆ ಲಕ್ಷ್ಮಣ್ ಅವರನ್ನು ಹಂಗಾಮಿ ಕೋಚ್ ಆಗಿ ನೇಮಿಸಲಾಗಿದೆ.

ಹಾಗೆಯೇ ಸೆಂಚುರಿಯನ್ ನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ನಾಲ್ಕು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಜಯ ಸಾಧಿಸಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಹೀಗಾಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್, ರಮಣ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.