ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟವನ್ನು ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಮೊದಲ ಸೆಷನ್ ಅಂತ್ಯಕ್ಕೂ ಮುನ್ನ 400 ರನ್‌ಗಳ ಗಡಿ ದಾಟಿದೆ. ತಂಡದ ಪರ ಮಾಜಿ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ನ ಎರಡನೇ ದಿನ ಸ್ಟೀವ್ ಸ್ಮಿತ್ 167 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 34 ನೇ ಶತಕವನ್ನು ಪೂರ್ಣಗೊಳಿಸಿದರು. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ ಸುಮಾರು 62 ಆಗಿತ್ತು. ಈ ಸರಣಿಯಲ್ಲಿ ಇದು ಅವರ ಸತತ ಎರಡನೇ ಶತಕವಾಗಿದೆ. ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆದ ಪಂದ್ಯದಲ್ಲೂ ಶತಕ ಬಾರಿಸಿದ್ದರು.
ಈ ಮೂಲಕ ಸ್ಮಿತ್ ಭಾರತದ ವಿರುದ್ಧ ಅದ್ಭುತ ದಾಖಲೆಯನ್ನೂ ನಿರ್ಮಿಸಿದ್ದಾರೆ. ಅವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 11 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ಅವರು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ.
ಜೋ ರೂಟ್ ಇದುವರೆಗೆ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ರೂಟ್ ಭಾರತದ ವಿರುದ್ಧ ಇದುವರೆಗೆ 10 ಶತಕಗಳನ್ನು ಗಳಿಸಿದ್ದರು. ಆದರೀಗ ಸ್ಮಿತ್ 11 ಶತಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ರಿಕಿ ಪಾಂಟಿಂಗ್, ಗ್ಯಾರಿ ಸೋಬರ್ಸ್ ಮತ್ತು ವಿವ್ ರಿಚರ್ಡ್ಸ್ ತಲಾ 8 ಶತಕಗಳನ್ನು ಗಳಿಸಿ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
ಸ್ಟೀವ್ ಸ್ಮಿತ್ ಅವರ ಈ ಶತಕದ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ತವರಿನಲ್ಲಿ ಆಡಿದ ಕೊನೆಯ 10 ಮೊದಲ ಇನ್ನಿಂಗ್ಸ್‌ಗಳಲ್ಲಿ ಸ್ಟೀವ್ ಸ್ಮಿತ್ ಭಾರತದ ವಿರುದ್ಧ 7 ಶತಕಗಳನ್ನು ಗಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ಶತಕ ಬಾರಿಸಿರುವ ದಾಖಲೆ ಈಗ ಸ್ಟೀವ್ ಸ್ಮಿತ್ ಹೆಸರಿನಲ್ಲಿದೆ. ಈ ವಿಷಯದಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸ್ಮಿತ್ ಇದುವರೆಗೆ ಭಾರತದ ವಿರುದ್ಧ 10 ಶತಕಗಳನ್ನು ಸಿಡಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಈ ಸರಣಿಯಲ್ಲಿ ತಲಾ 9 ಶತಕಗಳನ್ನು ಕಲೆಹಾಕಿದ್ದಾರೆ. ಇದಲ್ಲದೆ ಸ್ಮಿತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಭಾರತದ ವಿರುದ್ಧ ಶತಕ ಬಾರಿಸಿದ್ದರು.