- Kannada News Photo gallery Cricket photos Steve Smith slips out of the ICC Test Batters' Top 10 rankings after 3,691 days
3652 ದಿನಗಳ ಬಳಿಕ ಟಾಪ್-10 ನಿಂದ ಹೊರಬಿದ್ದ ಸ್ಟೀವ್ ಸ್ಮಿತ್
ICC Test Batters Rankings: ಐಸಿಸಿ ಟೆಸ್ಟ್ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಜೋ ರೂಟ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್ ತಂಡದ ಯುವ ದಾಂಡಿಗ ಹ್ಯಾರಿ ಬ್ರೂಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅತ್ತ ಕಳೆದ ಹತ್ತು ವರ್ಷಗಳಿಂದ ಟಾಪ್-10 ನಲ್ಲಿ ಕಾಣಿಸಿಕೊಂಡಿದ್ದ ಸ್ಟೀವ್ ಸ್ಮಿತ್ ಈ ಬಾರಿ ಅಗ್ರ ಹತ್ತರಿಂದ ಹೊರಬಿದ್ದಿದ್ದಾರೆ.
Updated on: Dec 14, 2024 | 9:23 AM

ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಬರೋಬ್ಬರಿ 10 ವರ್ಷಗಳ ಬಳಿಕ ಐಸಿಸಿ ಟೆಸ್ಟ್ ಬ್ಯಾಟರ್ಗಳ ಟಾಪ್-10 ರ‍್ಯಾಂಕಿಂಗ್ ಪಟ್ಟಿಯಿಂದ ಹೊರಬಿದ್ದಿದ್ದಾರೆ. ನೂತನ ಶ್ರೇಯಾಂಕ ಪಟ್ಟಿಯಲ್ಲಿ ಸ್ಮಿತ್ 11ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಒಂದು ದಶಕದಿಂದ ಅಗ್ರ ಹತ್ತರಲ್ಲಿ ವಿರಾಜಮಾನನಾಗಿ ಕಾಣಿಸಿಕೊಂಡ ಸ್ಮಿತ್ ಅಧಿಪತ್ಯ ಕೊನೆಗೊಂಡಂತಾಗಿದೆ.

ಸ್ಟೀವ್ ಸ್ಮಿತ್ ಡಿಸೆಂಬರ್ 12, 2014 ರಂದು ಮೊದಲ ಬಾರಿಗೆ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಅಗ್ರ ಹತ್ತರ ಪಟ್ಟಿಯಿಂದ ಒಮ್ಮೆಯೂ ಹೊರಬಿದ್ದಿರಲಿಲ್ಲ ಎಂಬುದು ವಿಶೇಷ. ಆದರೀಗ ಕಳಪೆ ಫಾರ್ಮ್ನಲ್ಲಿರುವ ಸ್ಮಿತ್ ಕೇವಲ 708 ಅಂಕಗಳನ್ನು ಮಾತ್ರ ಪಡೆದಿದ್ದಾರೆ.

ಈ ಅಂಕಗಳೊಂದಿಗೆ 11ನೇ ಸ್ಥಾನಕ್ಕೆ ಕುಸಿದಿರುವ ಸ್ಟೀವ್ ಸ್ಮಿತ್ 3652 ದಿನಗಳ ಟಾಪ್-10 ಪಾರುಪತ್ಯವನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಟಾಪ್-10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇದಾಗ್ಯೂ ಬ್ರಿಸ್ಬೇನ್ ಟೆಸ್ಟ್ನಲ್ಲಿ ಮಿಂಚಿದರೆ, ಮುಂದಿನ ವಾರದ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳಬಹುದು.

ಇನ್ನು ನೂತನ ಟೆಸ್ಟ್ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಇಂಗ್ಲೆಂಡ್ನ ಯುವ ದಾಂಡಿಗ ಹ್ಯಾರಿ ಬ್ರೂಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ಪರ ಕೇವಲ 23 ಟೆಸ್ಟ್ ಪಂದ್ಯಗಳನ್ನಾಡಿರುವ ಬ್ರೂಕ್ ಒಟ್ಟು 898 ಅಂಕಗಳನ್ನು ಕಲೆಹಾಕಿ ಈ ಸಾಧನೆ ಮಾಡಿದ್ದಾರೆ.

ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ರನ್ ಮೆಷಿನ್ ಜೋ ರೂಟ್ ಇದ್ದು, ಒಟ್ಟು 897 ಅಂಕಗಳನ್ನು ಕಲೆಹಾಕಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್. ಒಟ್ಟು 812 ಅಂಕಗಳನ್ನು ಪಡೆದಿರುವ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನ ಪಡೆದಿದ್ದಾರೆ.

ಇನ್ನು ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-5 ನಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟರ್ ಯಶಸ್ವಿ ಜೈಸ್ವಾಲ್. ಒಟ್ಟು 811 ಅಂಕಗಳನ್ನು ಹೊಂದಿರುವ ಜೈಸ್ವಾಲ್ 4ನೇ ಸ್ಥಾನ ಪಡೆದರೆ, ರಿಷಭ್ ಪಂತ್ 724 ಅಂಕಗಳೊಂದಿಗೆ 9ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
