
ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ (Suresh Raina) ಭಾರತದ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ರೈನಾ, ”ನನ್ನ ದೇಶ ಮತ್ತು ಉತ್ತರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸಿರುವುದಕ್ಕೆ ಗೌರವವಿದೆ. ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಬಿಸಿಸಿಐ (BCCI), ಯುಪಿ ಕ್ರಿಕೆಟ್, ಸಿಎಸ್‌ಕೆ, ರಾಜೀವ್ ಶುಕ್ಲಾ ಹಾಗೂ ನನಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.

200 ಪಂದ್ಯಗಳಲ್ಲಿ 5 ಸಾವಿರದ 528 ರನ್. ಸುರೇಶ್ ರೈನಾ ಈಗಲೂ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಚೆನ್ನೈ ಸೂಪರ್ ಕಿಂಗ್ಸ್‌ಗೆ ಅವರ ಕೊಡುಗೆ ಅಪಾರ. ಇಂತಹ ರೈನಾ ಈಗ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿ ವಿದೇಶಕ್ಕೆ ಹಾರಲು ತಯಾರಿ ನಡೆಸಿದ್ದಾರೆ.

ಕೋವಿಡ್‌ನಿಂದಾಗಿ 2020 ರ ಐಪಿಎಲ್ ಯುಎಇಯಲ್ಲಿ ನಡೆಯಿತು. ಈ ವೇಳೆ ರೈನಾ ಹಠಾತ್ತನೆ ಪಂದ್ಯಾವಳಿಯಿಂದ ಅರ್ಧಕ್ಕೆ ದೇಶಕ್ಕೆ ಮರಳಿದರು. ಅಲ್ಲಿಂದ, ಯೋಲೋ ಬ್ರಿಗೇಡ್‌ನೊಂದಿಗಿನ ಅವರ ಸಂಬಂಧ ಹದಗೆಟ್ಟಿತು. ಕಳೆದ ವರ್ಷ ಐಪಿಎಲ್‌ನ ಮೆಗಾ ಹರಾಜಿನಲ್ಲಿ ಸಿಎಸ್‌ಕೆ ಮಿಸ್ಟರ್ ಐಪಿಎಲ್ನನ್ನು ಉಳಿಸಿಕೊಳ್ಳುವ ಮನಸ್ಸು ಮಾಡಿರಿಲ್ಲ. ಜೊತೆಗೆ ಉಳಿದ ಫ್ರಾಂಚೈಸಿಗಳು ಕೂಡ ರೈನಾರನ್ನು ಖರೀದಿಸಲು ಮುಂದಾಗಲಿಲ್ಲ.

ಈಗ ಭಾರತ ಕ್ರಿಕೆಟ್ನೊಂದಿಗಿನ ಎಲ್ಲಾ ರೀತಿಯ ಸಂಬಂಧಗಳಿಗೆ ಇತಿಶ್ರೀ ಹಾಡಿರುವ ರೈನಾ ವಿದೇಶಿ ಲೀಗ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿದೇಶಿ ಲೀಗ್‌ನಲ್ಲಿ ಆಡುವ ಸಲುವಾಗಿಯೇ ರೈನಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಏಕೆಂದರೆ ಭಾರತೀಯ ಕ್ರಿಕೆಟ್ ಮಂಡಳಿಯ ನಿಯಮಗಳ ಪ್ರಕಾರ, ಒಬ್ಬ ಆಟಗಾರ ಬಿಸಿಸಿಐ ಆಯೋಜಿಸುವ ಲೀಗ್‌ಗಳಲ್ಲಿ ಅಥವಾ ದೇಶೀ ಕ್ರಿಕೆಟ್ನಲ್ಲಿ ಆಡುತ್ತಿದ್ದರೆ ಆತ ಮತ್ತೊಂದು ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ.

ಐಪಿಎಲ್‌ನ ಈ ಮಾರ್ಕ್ಯೂ ಬ್ಯಾಟರ್ ಇನ್ನು ಮುಂದೆ ಮಿಲಿಯನೇರ್ ಲೀಗ್‌ನಲ್ಲಿ ಕಾಣಿಸುವುದಿಲ್ಲ. ರೈನಾ ಅವರ ಅಭಿಮಾನಿಗಳು ಅವರನ್ನು ದಕ್ಷಿಣ ಆಫ್ರಿಕಾ ಅಥವಾ ಯುಎಇ ಟಿ20 ಲೀಗ್‌ನಲ್ಲಿ ನೋಡಲು ಕಾತುರರಾಗಿದ್ದಾರೆ.