
2025 ರ ಏಷ್ಯಾಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಟೂರ್ನಿಗಾಗಿ ಇದುವರೆಗೆ ಯಾವ ತಂಡವನ್ನು ಪ್ರಕಟಿಸಲಾಗಿಲ್ಲ. ಆದಾಗ್ಯೂ ಸೆಪ್ಟೆಂಬರ್ 9 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಾರಂಭವಾಗುವ ಈ ಪಂದ್ಯಾವಳಿಗೆ ವಾರಕ್ಕೂ ಮುನ್ನವೇ ಎಲ್ಲಾ ತಂಡಗಳು ಯುಎಇಗೆ ಪ್ರಯಾಣ ಬೆಳೆಸಬೇಕಾಗಿದೆ. ಹೀಗಾಗಿ ಆಗಸ್ಟ್ ಅಂತ್ಯಕ್ಕೂ ಮುನ್ನ ಎಲ್ಲಾ ತಂಡಗಳು ಪ್ರಕಟವಾಗಲಿವೆ.

ಇತ್ತ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಕೂಡ ಆಗಸ್ಟ್ 20ರೊಳಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಂಜುರಿಯಿಂದಾಗಿ ಏಷ್ಯಾಕಪ್‌ನಲ್ಲಿ ಆಡುವ ಬಗ್ಗೆ ಅನುಮಾನ ಮೂಡಿಸಿದ್ದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಭಾರತೀಯ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೆಲವು ವಾರಗಳ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅಂದಿನಿಂದ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸೂರ್ಯ ಬೆಂಗಳೂರಿನಲ್ಲಿರುವ ಎನ್ಸಿಎಯಲ್ಲಿ ರಿಹ್ಯಾಬ್ನಲ್ಲಿದ್ದರು. ಇದೀಗ ವೈದ್ಯಕೀಯ ತಂಡವು ಅವರ ಫಿಟ್ನೆಸ್ ಪರೀಕ್ಷೆಯನ್ನು ನಡೆಸಿದೆ ಎಂದು ಇಂಗ್ಲಿಷ್ ಪತ್ರಿಕೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿ ಬಹಿರಂಗಪಡಿಸಿದೆ.

ವರದಿಯ ಪ್ರಕಾರ, ಈ ಪರೀಕ್ಷೆಯ ಫಲಿತಾಂಶ ಹೊರಬಂದಿದ್ದು ಸೂರ್ಯಕುಮಾರ್ ಯಾದವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ ಎಂದು ತಿಳಿದಬಂದಿದೆ. ಇದರರ್ಥ ಸೂರ್ಯ ಏಷ್ಯಾಕಪ್‌ನಲ್ಲಿ ಆಡುವುದರ ಜೊತೆಗೆ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ.

ಆಗಸ್ಟ್ 19 ರಂದು ಈ ಪಂದ್ಯಾವಳಿಗೆ ಟೀಂ ಇಂಡಿಯಾ ಘೋಷಣೆಯಾಗಲಿರುವ ಕಾರಣ ಸೂರ್ಯಕುಮಾರ್ ಅವರ ಫಿಟ್ನೆಸ್ ತಂಡಕ್ಕೆ ಮತ್ತು ವಿಶೇಷವಾಗಿ ಆಯ್ಕೆ ಸಮಿತಿಗೆ ಹೆಚ್ಚಿನ ಸಮಾಧಾನ ತಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ನಾಯಕನನ್ನು ಆಯ್ಕೆ ಮಾಡುವ ಸವಾಲು ಇರುವುದಿಲ್ಲ ಮತ್ತು ತಂಡದ ಬ್ಯಾಟಿಂಗ್ ಕೂಡ ಬಲಗೊಳ್ಳುತ್ತದೆ.

ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿರುವ ದಿ ಇಂಡಿಯನ್ ಎಕ್ಸ್‌ಪ್ರೆಸ್, ಫಿಟ್ ಆಗಿ ಮರಳುತ್ತಿರುವ ಸೂರ್ಯಕುಮಾರ್ ಏಷ್ಯಾಕಪ್‌ನಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಅವರು ತಂಡದ ಆಯ್ಕೆ ಸಮಿತಿ ಸಭೆಯಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿಯು ಆಗಸ್ಟ್ 19 ರ ಮಂಗಳವಾರ ಸಭೆ ಸೇರಿ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ನಡೆಯಲಿರುವ ಏಷ್ಯಾಕಪ್‌ಗಾಗಿ ತಂಡವನ್ನು ಆಯ್ಕೆ ಮಾಡುತ್ತದೆ. ಸೂರ್ಯ ಅವರ ಮರಳುವಿಕೆ ಅವರ ಕೆಲವು ಸಮಸ್ಯೆಗಳನ್ನು ಕಡಿಮೆ ಮಾಡಿದ್ದರೂ, ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್‌ಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ? ಸೂರ್ಯ ಫಿಟ್ ಆಗಿಲ್ಲದಿದ್ದರೆ, ಗಿಲ್ ಅವರನ್ನು ನಾಯಕನಾಗಿ ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂದು ನಂಬಲಾಗಿತ್ತು. ಆದರೆ ಈಗ ಅವರ ಆಯ್ಕೆಯೂ ಸದ್ಯಕ್ಕೆ ಖಚಿತವಾಗಿಲ್ಲ.