Updated on: Jan 08, 2023 | 10:31 PM
ರಾಜ್ಕೋಟ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ್ದ ಸೂರ್ಯ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 112 ರನ್ ಚಚ್ಚಿದ್ದರು.
ಈ ಶತಕದೊಂದಿಗೆ ಇದೀಗ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿರುವುದು ವಿಶೇಷ. ಅಂದರೆ ಲಂಕಾ ವಿರುದ್ಧದ ಶತಕವು ಸೂರ್ಯಕುಮಾರ್ ಪಾಲಿನ ಮೂರನೇ ಟಿ20 ಶತಕವಾಗಿದೆ.
ಈ ಹಿಂದೆ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ದದ ಟಿ20 ಪಂದ್ಯಗಳಲ್ಲಿ ಸೂರ್ಯ ಸೆಂಚುರಿ ಸಿಡಿಸಿದ್ದರು. ಇದೀಗ ಮೂರನೇ ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯದೇ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಇಲ್ಲಿ ಹಿಟ್ಮ್ಯಾನ್ ಆರಂಭಿಕನಾಗಿ ಕಣಕ್ಕಿಳಿದು ಒಟ್ಟು 4 ಸೆಂಚುರಿ ಸಿಡಿಸಿದ್ದಾರೆ. ಆದರೆ 3ನೇ ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಇದೀಗ ಒಟ್ಟು 3 ಶತಕಗಳನ್ನು ಬಾರಿಸಿದ್ದಾರೆ.
ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯದೇ 3 ಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿ ಸೂರ್ಯಕುಮಾರ್ ಯಾದವ್ ಹೊರಹೊಮ್ಮಿದ್ದಾರೆ.
ಇದಲ್ಲದೆ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 1500 ರನ್ ಪೂರೈಸಿದ ವಿಶ್ವ ದಾಖಲೆಯನ್ನೂ ಕೂಡ ಸೂರ್ಯಕುಮಾರ್ ಯಾದವ್ ನಿರ್ಮಿಸಿರುವುದು ವಿಶೇಷ. ಸೂರ್ಯ ಕೇವಲ 843 ಎಸೆತಗಳಲ್ಲಿ 1500 ರನ್ ಕಲೆಹಾಕಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 1500 ರನ್ ಬಾರಿಸಿ ಟಿ20 ಕ್ರಿಕೆಟ್ನ ವೇಗದ ರನ್ ಸರದಾರ ಎನಿಸಿಕೊಂಡಿದ್ದಾರೆ.