
T20 Blast 2023: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಸ್ಯಾಮ್ ಕರನ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಲಂಡನ್ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸರ್ರೆ ಹಾಗೂ ಗ್ಲಾಮೋರ್ಗನ್ ತಂಡಗಳು ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲಾಮೋರ್ಗನ್ ತಂಡದ ನಾಯಕ ಕಿರಣ್ ಕಾರ್ಲ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸರ್ರೆ ತಂಡಕ್ಕೆ ಆರಂಭಿಕರಾದ ವಿಲ್ ಜಾಕ್ಸ್ (60) ಹಾಗೂ ಲಾರಿ ಇವಾನ್ಸ್ (40) ಬಿರುಸಿನ ಆರಂಭ ಒದಗಿಸಿದ್ದರು.

ಆರಂಭಿಕರಿಬ್ಬರು ಔಟಾದ ಬಳಿಕ ಜೊತೆಯಾದ ಸುನಿಲ್ ನರೈನ್ ಹಾಗೂ ಸ್ಯಾಮ್ ಕರನ್ ರನ್ ಗತಿ ವೇಗವನ್ನು ಹೆಚ್ಚಿಸಿದರು. ಈ ವೇಳೆ 19 ಎಸೆತಗಳಲ್ಲಿ 36 ರನ್ ಬಾರಿಸಿದ ನರೈನ್ ಔಟಾದರು.

ಆದರೆ ಮತ್ತೊಂದೆಡೆ ಸಿಡಿಲಬ್ಬರದ ಮುಂದುವರೆಸಿದ ಸ್ಯಾಮ್ ಕರನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟಿ20 ಬ್ಲಾಸ್ಟ್ನಲ್ಲಿ ಸರ್ರೆ ಪರ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ದಾಖಲೆಯನ್ನು ಸ್ಯಾಮ್ ಕರನ್ ತಮ್ಮದಾಗಿಸಿಕೊಂಡರು.

ಅಂತಿಮವಾಗಿ ಸ್ಯಾಮ್ ಕರನ್ 22 ಎಸೆತಗಳಲ್ಲಿ 59 ರನ್ ಬಾರಿಸಿ ಔಟಾದರು. ಆದರೆ ಮತ್ತೊಂದೆಡೆ ಸಹೋದರ ಟಾಮ್ ಕರನ್ 13 ಎಸೆತಗಳಲ್ಲಿ 23 ರನ್ ಬಾರಿಸಿ 20 ಓವರ್ಗಳಲ್ಲಿ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 238 ಕ್ಕೆ ತಂದು ನಿಲ್ಲಿಸಿದರು.

239 ರನ್ಗಳ ಕಠಿಣ ಗುರಿ ಪಡೆದ ಗ್ಲಾಮೋರ್ಗನ್ ಪರ ಕ್ರಿಸ್ ಕೂಕ್ (49) ಅಬ್ಬರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ಗಳಿಸಿ ಗ್ಲಾಮೋರ್ಗನ್ ತಂಡವು 81 ರನ್ಗಳಿಂದ ಸೋಲೊಪ್ಪಿಕೊಂಡಿತು.