Updated on: Jun 21, 2023 | 11:08 PM
ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಇದಾಗ್ಯೂ ಈ ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಿಲ್ಲ. ಇತ್ತ ಆಯ್ಕೆ ಸಮಿತಿಯು ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಇರಾದೆಯಲ್ಲಿದ್ದಾರೆ.
ಇದಕ್ಕಾಗಿ ಕೆಲ ಯುವ ಆಟಗಾರರ ಪಟ್ಟಿಯನ್ನೂ ಕೂಡ ಆಯ್ಕೆಗಾರರು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಉಪೇಂದ್ರ ಯಾದವ್ ಹೆಸರು ಕೂಡ ಕಾಣಿಸಿಕೊಂಡಿದೆ.
ಉತ್ತರ ಪ್ರದೇಶ ಮೂಲದ ಉಪೇಂದ್ರ ಯಾದವ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಈಗಾಗಲೇ ದೇಶೀಯ ಅಂಗಳದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದಾಗ್ಯೂ ಅವರಿಗೆ ಟೀಮ್ ಇಂಡಿಯಾದ ಅದೃಷ್ಟದ ಬಾಗಿಲು ತೆರೆದಿಲ್ಲ.
ಇತ್ತ ಭಾರತ ತಂಡದಲ್ಲಿ ಅವಕಾಶ ಪಡೆದ ಕೆಎಸ್ ಭರತ್ 8 ಇನಿಂಗ್ಸ್ಗಳಿಂದ ಕಲೆಹಾಕಿದ್ದು ಕೇವಲ 129 ರನ್ ಮಾತ್ರ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸೀಸ್ ವೇಗಿಗಳನ್ನು ಎದುರಿಸಲು ಭರತ್ ತಡಕಾಡಿದ್ದರು.
ಹೀಗಾಗಿಯೇ ಬಿಸಿಸಿಐ ಆಯ್ಕೆ ಸಮಿತಿ ಹೊಸ ವಿಕೆಟ್ ಕೀಪರ್ನತ್ತ ಕಣ್ಣಾಡಿಸಿದ್ದಾರೆ. ಈ ವೇಳೆ ಕಂಡು ಬಂದ ಹೆಸರು ಉಪೇಂದ್ರ ಯಾದವ್. ರಣಜಿ ಕ್ರಿಕೆಟ್ನಲ್ಲಿ ಯುಪಿ ಪರ 47 ಇನಿಂಗ್ಸ್ ಆಡಿರುವ ಉಪೇಂದ್ರ 5 ಭರ್ಜರಿ ಶತಕ, 7 ಅರ್ಧಶತಕದೊಂದಿಗೆ ಒಟ್ಟು 1666 ರನ್ ಕಲೆಹಾಕಿದ್ದಾರೆ.
ಒಂದು ವೇಳೆ ಕೆಎಸ್ ಭರತ್ ಅವರನ್ನು ತಂಡದಿಂದ ಕೈ ಬಿಟ್ಟರೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ಗಳಾಗಿ ಇಶಾನ್ ಕಿಶನ್ ಹಾಗೂ ಉಪೇಂದ್ರ ಯಾದವ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಆದರೆ ಮತ್ತೊಂದೆಡೆ ಕೆಎಸ್ ಭರತ್ಗೆ ಇನ್ನೊಂದು ಅವಕಾಶ ನೀಡಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಕೆಎಸ್ ಭರತ್ ಅವಕಾಶ ಪಡೆಯಲಿದ್ದಾರಾ ಅಥವಾ ಉಪೇಂದ್ರ ಯಾದವ್ ಎಂಟ್ರಿ ಕೊಡಲಿದ್ದಾರಾ ಎಂಬುದೇ ಕುತೂಹಲ.
ಭಾರತ-ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯವು ಜುಲೈ 12 ರಿಂದ 16 ರವರೆಗೆ ನಡೆಯಲಿದ್ದು, 2ನೇ ಪಂದ್ಯ ಜುಲೈ 20 ರಿಂದ 24 ರವರೆಗೆ ಜರುಗಲಿದೆ.