- Kannada News Photo gallery Cricket photos T20 World Cup 2022 IND vs NZ warm up game abandoned Now Team India have reached Melbourne
IND vs PAK: ಯಶಸ್ವಿಯಾಗದ ಅಭ್ಯಾಸ ಪಂದ್ಯ: ಪಾಕಿಸ್ತಾನ ವಿರುದ್ಧದ ಕದನಕ್ಕೆ ಮೆಲ್ಬೋರ್ನ್ ತಲುಪಿದ ಟೀಮ್ ಇಂಡಿಯಾ
India vs Pakistan: ಅಭ್ಯಾಸ ಪಂದ್ಯ ಪೂರ್ಣಗೊಂಡ ಬಳಿಕ ಭಾರತ ಮೆಲ್ಬೋರ್ನ್ಗೆ ತಲುಪಿದೆ. ಅಕ್ಟೋಬರ್ 23 ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕಾಗಿ ರೋಹಿತ್ ಪಡೆ ಎಮ್ಸಿಜಿಗೆ ಕಾಲಿಟ್ಟಿದೆ.
Updated on:Oct 20, 2022 | 9:47 AM

ಐಸಿಸಿ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತಕ್ಕೆ ಆಯೋಜಿಸಿದ್ದ ಎರಡು ಅಧಿಕೃತ ಅಭ್ಯಾಸ ಪಂದ್ಯ ಕೊನೆಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ವಾರ್ಮ್- ಅಪ್ ಮ್ಯಾಚ್ನಲ್ಲಿ ರೋಚಕ ಜಯ ಸಾಧಿಸಿದರೆ, ದ್ವಿತೀಯ ಪಂದ್ಯ ಯಶಸ್ವಿಯಾಗಲಿಲ್ಲ. ಬುಧವಾರ ನ್ಯೂಜಿಲೆಂಡ್ ವಿರುದ್ಧ ಆಯೋಜಿಸಿದ್ದ ಎರಡನೆ ಅಭ್ಯಾಸ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು.

ಇದೀಗ ಅಭ್ಯಾಸ ಪಂದ್ಯ ಪೂರ್ಣಗೊಂಡ ಬಳಿಕ ಭಾರತ ಮೆಲ್ಬೋರ್ನ್ಗೆ ತಲುಪಿದೆ. ಅಕ್ಟೋಬರ್ 23 ರಂದು ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕಾಗಿ ರೋಹಿತ್ ಪಡೆ ಎಮ್ಸಿಜಿಗೆ ಕಾಲಿಟ್ಟಿದೆ.

ಯುಜ್ವೇಂದ್ರ ಚಹಲ್ ಅವರು ವಿಮಾನದಲ್ಲಿ ಮೆಲ್ಬೋರ್ನ್ಗೆ ತೆರಳುತ್ತಿರುವ ಫೋಟೋವನ್ನು ರೋಹಿತ್ ಶರ್ಮಾ, ಶಾರ್ದೂಲ್ ಠಾಕೂರ್ ಜೊತೆ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಕೂಡ ಪೋಸ್ಟ್ ಮಾಡಿದ್ದಾರೆ. ಶುಕ್ರವಾರದಿಂದ ಟೀಮ್ ಇಂಡಿಯಾ ಎಮ್ಸಿಜಿಯಲ್ಲಿ ಅಭ್ಯಾಸ ಶುರು ಮಾಡಲಿದೆ.

ಇನ್ನು ಭಾರತ- ಪಾಕ್ ಪಂದ್ಯ ನಡೆಯಲಿರುವ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸುತ್ತ ಮುತ್ತ ಶೇ.60 ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ. ಹೀಗಾಗಿ ಈ ಪಂದ್ಯ ನಡೆಯುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಒಂದು ವೇಳೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಮಳೆ ಬಂದರೆ, ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಇಲ್ಲಿ ರದ್ದು ಮಾಡಿದರೆ ಮೀಸಲು ದಿನ ಇರುವುದಿಲ್ಲ. ಬದಲಾಗಿ ಉಭಯ ತಂಡಗಳಿಗೂ ತಲಾ 1 ಪಾಯಿಂಟ್ ನೀಡಲಾಗುತ್ತದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಟಿ20 ವಿಶ್ವಕಪ್ ಮಹಾ ಟೂರ್ನಿಯಲ್ಲಿ ಇದುವರೆಗೆ ಒಟ್ಟು ಆರು ಬಾರಿ ಮುಖಾಮುಖಿಯಾಗಿವೆ. ಈ ಆರು ಪಂದ್ಯಗಳಲ್ಲಿ ಪೈಕಿ ಟೀಮ್ ಇಂಡಿಯಾ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಪಾಕ್ ಪಡೆ ಗೆಲುವು ಸಾಧಿಸಿದೆ.

ಸೂಪರ್ 12 ಹಂತಕ್ಕೆ ಪ್ರವೇಶ ಪಡೆದಿದ್ದ ತಂಡಗಳ ಎಲ್ಲ ಅಭ್ಯಾಸ ಪಂದ್ಯ ಮುಕ್ತಾಯಗೊಂಡಿದೆ. ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುವ ಮೂಲಕ ಗ್ರೂಪ್ 1 ರಲ್ಲಿ ಮೊದಲ ಸೂಪರ್ 12 ಆರಂಭವಾಗಲಿದೆ.
Published On - 9:46 am, Thu, 20 October 22




