- Kannada News Photo gallery Cricket photos T20 World Cup 2024 hardik pandya concern about batting collapse kannada news
IND vs BAN: ಜಯದ ನಡುವೆಯೂ ತಂಡದ ನ್ಯೂನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಾರ್ದಿಕ್ ಪಾಂಡ್ಯ
T20 World Cup 2024 Hardik Pandya: ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾದ ಚಿಂತೆ ಏನು ಎಂಬುದನ್ನು ಬಹಿರಂಗಪಡಿಸಿದರು. ತಂಡದ ನ್ಯೂನತೆಯ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡವಾಗಿ ನಾವು ಹಲವು ಕಡೆಗಳಲ್ಲಿ ಸುಧಾರಿಸಿಕೊಳ್ಳಬಹುದು. ನಾವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುವ ವಿಧಾನವನ್ನು ಸುಧಾರಿಸಬಹುದು ಎಂದರು.
Updated on: Jun 23, 2024 | 3:58 PM

ಐಪಿಎಲ್ನಲ್ಲಿ ನಾಯಕನಾಗಿ ಹಾಗೂ ವೈಯಕ್ತಿಕವಾಗಿಯೂ ತನ್ನ ಕಳಪೆ ಪ್ರದರ್ಶನದಿಂದಾಗಿ ಕ್ರಿಕೆಟ್ ಪರಿಣಿತರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರಿಂದಲೂ ಅಪಮಾನಕ್ಕೊಳಗಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ತಂಡದ ಪರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದ್ದಾರೆ.

ಇದುವರೆಗೆ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಪಾಂಡ್ಯ, ಬ್ಯಾಟ್ನಿಂದ ಅಥವಾ ಬಾಲ್ನಿಂದ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನ ಓಟದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಪಾಂಡ್ಯ ತನ್ನ ಆಲ್ರೌಂಡರ್ ಆಟದಿಂದಾಗಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಮೊದಲು ಬ್ಯಾಟಿಂಗ್ನಲ್ಲಿ ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಅದ್ಭುತ ಸಿಕ್ಸರ್‌ಗಳ ನೆರವಿನಿಂದ 50 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇದಲ್ಲದೇ ಬೌಲಿಂಗ್ನಲ್ಲೂ ಮಿಂಚಿದ ಹಾರ್ದಿಕ್ 3 ಓವರ್ಗಳಲ್ಲಿ 32 ರನ್ ನೀಡಿ ಒಂದು ವಿಕೆಟ್ ಪಡೆದರು. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾದ ಚಿಂತೆ ಏನು ಎಂಬುದನ್ನು ಬಹಿರಂಗಪಡಿಸಿದರು. ತಂಡದ ನ್ಯೂನತೆಯ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡವಾಗಿ ನಾವು ಹಲವು ಕಡೆಗಳಲ್ಲಿ ಸುಧಾರಿಸಿಕೊಳ್ಳಬಹುದು. ನಾವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುವ ವಿಧಾನವನ್ನು ಸುಧಾರಿಸಬಹುದು.

ಇದರಿಂದಾಗಿ ತಂಡ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಲ್ಲದು. ನಾವು ನಿಜವಾಗಿಯೂ ಶ್ರೇಷ್ಠ ಕ್ರಿಕೆಟ್ ಆಡಿದ್ದೇವೆ. ತಂಡದ ಎಲ್ಲಾ ಆಟಗಾರರು ವೈಯಕ್ತಿಕವಾಗಿ ಅದ್ಭುತ ಪ್ರದರ್ಶನ ನೀಡಿದರು. ಅಲ್ಲದೆ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರು ಎಂದರು.

ಪಂದ್ಯದ ಬಗ್ಗೆ ಹೇಳುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 146 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ಬಾಂಗ್ಲಾ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು.




