
T20 World Cup 2024: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದಾರೆ. ಈ ಹಿಂದೆ ಗಾಯದ ಕಾರಣ ಐಪಿಎಲ್ 2024 ಅನ್ನು ಮಾರ್ಷ್ ಅರ್ಧದಲ್ಲೇ ತೊರೆದಿದ್ದರು. ಇದೀಗ ಟಿ20 ವಿಶ್ವಕಪ್ಗಾಗಿ ಆಗಮಿಸಿರುವ ಆಸೀಸ್ ನಾಯಕ ಅಭ್ಯಾಸ ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದಾರೆ.

ನಮೀಬಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕಾಣಿಸಿಕೊಂಡರೂ ಮಿಚೆಲ್ ಮಾರ್ಷ್ ಅರ್ಧದಲ್ಲೇ ಮೈದಾನ ತೊರೆದಿದ್ದರು. ಅದರಲ್ಲೂ ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಬೌಲಿಂಗ್ ಮಾಡಿರಲಿಲ್ಲ. ಹಾಗೆಯೇ ಫೀಲ್ಡಿಂಗ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ತಂಡವನ್ನು ಹಂಗಾಮಿ ನಾಯಕ ಮ್ಯಾಥ್ಯೂ ವೇಡ್ ಮುನ್ನಡೆಸಿದ್ದರು.

ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಅಭ್ಯಾಸ ಪಂದ್ಯದ ವೇಳೆ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿರಲಿಲ್ಲ. ಇದಾಗ್ಯೂ ಜೂನ್ 6 ರಂದು ನಡೆಯಲಿರುವ ಮೊದಲ ಪಂದ್ಯದ ವೇಳೆ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡವು ತನ್ನ ಮೊದಲ ಪಂದ್ಯವನ್ನು ಜೂನ್ 6 ರಂದು ಒಮಾನ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಕಾಣಿಸಿಕೊಂಡರೂ ಬೌಲಿಂಗ್ ಮಾಡುವ ಸಾಧ್ಯತೆಯಿಲ್ಲ. ಹೀಗಾಗಿ ಅವರು ಲೀಗ್ ಹಂತದ ಪಂದ್ಯಗಳಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಬಹುದು.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ: ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.