Haris Rauf: ವಿಶ್ವ ದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್
T20 World Cup 2024: ಟಿ20 ವಿಶ್ವಕಪ್ನ 22ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 2ನೇ ಪಾಕ್ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನ್ ತಂಡದ ಸ್ಪಿನ್ನರ್ ಶಾದಾಬ್ ಖಾನ್ ಈ ಸಾಧನೆ ಮಾಡಿದ್ದರು.
Updated on: Jun 12, 2024 | 12:15 PM

T20 World Cup 2024: ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೆನಡಾ ವಿರುದ್ಧದ ಪಂದ್ಯದ ಮೂಲಕ ಪಾಕ್ ವೇಗಿ ಹ್ಯಾರಿಸ್ ರೌಫ್ (Haris Rauf) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿತ್ತು. ಈ ವೇಳೆ 4 ಓವರ್ಗಳನ್ನು ಎಸೆದಿದ್ದ ಹ್ಯಾರಿಸ್ ರೌಫ್ 26 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಎರಡು ವಿಕೆಟ್ಗಳೊಂದಿಗೆ ಹ್ಯಾರಿಸ್ ರೌಫ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿದ್ದಾರೆ.

ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ನೂರು ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆ ಹ್ಯಾರಿಸ್ ರೌಫ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬಿಲಾಲ್ ಖಾನ್ ಹೆಸರಿನಲ್ಲಿತ್ತು.

ಒಮಾನ್ ತಂಡದ ವೇಗಿ ಬಿಲಾಲ್ ಖಾನ್ ಟಿ20 ಕ್ರಿಕೆಟ್ನಲ್ಲಿ ಕೇವಲ 71 ಇನಿಂಗ್ಸ್ಗಳಲ್ಲಿ 100 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಹ್ಯಾರಿಸ್ ರೌಫ್ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

ಪಾಕ್ ವೇಗಿ 69 ಇನಿಂಗ್ಸ್ಗಳ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ ನೂರು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ಗಳನ್ನು ಕಬಳಿಸಿದ ಬೌಲರ್ ದಾಖಲೆ ರಶೀದ್ ಖಾನ್ ಹೆಸರಿನಲ್ಲಿದೆ. ಅಪ್ಘಾನ್ ಸ್ಪಿನ್ನರ್ ರಶೀದ್ ಖಾನ್ 53 ಪಂದ್ಯಗಳ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ವಿಕೆಟ್ ಕಬಳಿಸಿದ್ದಾರೆ. ಇದೀಗ ವೇಗದ ಬೌಲರ್ಗಳ ಪಟ್ಟಿಯಲ್ಲಿ ಹ್ಯಾರಿಸ್ ರೌಫ್ ಅಗ್ರಸ್ಥಾನಕ್ಕೇರಿದ್ದಾರೆ.
