T20 World Cup 2024: ಒಂದೆಡೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ಗಾಗಿ ಸಿದ್ಧತೆಯಲ್ಲಿದ್ದರೆ, ಮತ್ತೊಂದೆಡೆ ಆಝಂ ಖಾನ್ ಆಯ್ಕೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಝಂ ಅವರ ಅತ್ಯಂತ ಕಳಪೆ ಪ್ರದರ್ಶನ. ಅಂದರೆ ಕಳೆದ 12 ಇನಿಂಗ್ಸ್ಗಳಿಂದ ಆಝಂ ಖಾನ್ ಕಲೆಹಾಕಿರುವುದು ಎರಡಂಕಿ ಮೊತ್ತ ಎಂದರೆ ನಂಬಲೇಬೇಕು.
2021ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಆಝಂ ಖಾನ್ ಚೊಚ್ಚಲ ಪಂದ್ಯದಲ್ಲಿ ಕೇವಲ 5 ರನ್ಗಳಿಸಿ ಔಟಾಗಿದ್ದರು. ಇನ್ನು 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.
ಇದಾದ ಬಳಿಕ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಅಫ್ಘಾನ್ ವಿರುದ್ಧದ 2ನೇ ಪಂದ್ಯದಲ್ಲಿ ಗಳಿಸಿದ್ದು ಕೇವಲ 1 ರನ್. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಝಂ ಖಾನ್ ಕೇವಲ 12 ರನ್ ಮಾತ್ರ ಗಳಿಸಿದ್ದರು.
ಅಂದರೆ ತಮ್ಮ ಕೆರಿಯರ್ನ ಮೊದಲ 7 ಪಂದ್ಯಗಳಲ್ಲಿ 3.8 ರ ಸರಾಸರಿಯಲ್ಲಿ ಮಾತ್ರ ಕಲೆಹಾಕಿದ್ದರು. ಇದಾಗ್ಯೂ ಅವರನ್ನು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಈ ಸರಣಿಯಲ್ಲೂ ಆಝಂ ಕಳಪೆ ಪ್ರದರ್ಶನ ಮುಂದುವರೆಸಿದ್ದರು.
ಇದಾಗ್ಯೂ ಆಝಂ ಖಾನ್ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಆಯ್ಕೆ ಬಗ್ಗೆ ಇದೀಗ ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಆಝಂ ಖಾನ್ಗೆ ಮಾನದಂಡಗಳೇನು ಎಂದು ಪ್ರಶ್ನಿಸುತ್ತಿದ್ದಾರೆ.
ಏಕೆಂದರೆ ಪಾಕಿಸ್ತಾನ್ ಪರ 12 ಟಿ20 ಇನಿಂಗ್ಸ್ಗಳನ್ನು ಆಡಿರುವ ಆಝಂ ಖಾನ್ ಇದುವರೆಗೆ ಕೇವಲ 88 ರನ್ ಮಾತ್ರ ಕಲೆಹಾಕಿದ್ದಾರೆ. ಅಂದರೆ ಪ್ರತಿ ಪಂದ್ಯಗಳಲ್ಲಿ ಅವರ ಸರಾಸರಿ ಕೇವಲ 9.78 ರನ್ ಅಷ್ಟೇ. ಇದಾಗ್ಯೂ ಟಿ20 ವಿಶ್ವಕಪ್ನಂತಹ ಮಹತ್ವದ ಟೂರ್ನಿಗೆ ಆಝಂ ಖಾನ್ ಅವರನ್ನು ಆಯ್ಕೆ ಮಾಡಿರುವುದೇ ಅಚ್ಚರಿ.
ಅಂದಹಾಗೆ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಪುತ್ರ. ಹೀಗಾಗಿಯೇ ಸತತ ವೈಫಲ್ಯದ ಹೊರತಾಗಿಯೂ ಆಝಂಗೆ ಪಾಕ್ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಆಕ್ರೋಶ ಮತ್ತು ಟೀಕೆಗಳ ನಡುವೆಯೂ ಆಝಂ ಖಾನ್ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸಿರುವುದು ವಿಶೇಷ.
Published On - 8:59 am, Tue, 4 June 24