- Kannada News Photo gallery Cricket photos T20 World Cup 2024: Rohit Sharma breaks Chris Gayle's record
Rohit Sharma: ರೋಹಿತ್ ಶರ್ಮಾ ಸಿಕ್ಸ್ಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ
T20 World Cup 2024: ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ಭರ್ಜರಿ ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳೊಂದಿಗೆ ಕ್ರಿಸ್ ಗೇಲ್ ಹಾಗೂ ಮಹೇಲ ಜಯವರ್ಧನೆ ಹೆಸರಿನಲ್ಲಿದ್ದ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ರೋಹಿತ್ ಶರ್ಮಾ ಬರೆದಿರುವ ಹೊಸ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
Updated on: Jun 28, 2024 | 10:09 AM

T20 World Cup 2024: ಟಿ20 ವಿಶ್ವಕಪ್ನ 2ನೇ ಸೆಮಿಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಹಿಟ್ಮ್ಯಾನ್ 39 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 57 ರನ್ ಬಾರಿಸಿದ್ದರು.

ಈ ಎರಡು ಸಿಕ್ಸ್ಗಳೊಂದಿಗೆ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ರೋಹಿತ್ ಶರ್ಮಾ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿತ್ತು.

ವೆಸ್ಟ್ ಇಂಡೀಸ್ ಪರ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳನ್ನಾಡಿರುವ ಕ್ರಿಸ್ ಗೇಲ್ ಒಟ್ಟು 21 ಸಿಕ್ಸ್ಗಳನ್ನು ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಹಿಟ್ಮ್ಯಾನ್ ಈ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಕದಿನ ವಿಶ್ವಕಪ್ನಲ್ಲಿ ನಾಕೌಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಈವರೆಗೆ 22 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಲ್ಲದೆ ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದ ವಿಶ್ವ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಹೇಲ ಜಯವರ್ಧನೆ ಹೆಸರಿನಲ್ಲಿತ್ತು. ಜಯವರ್ಧನೆ ಒಟ್ಟು 111 ಫೋರ್ಗಳನ್ನು ಬಾರಿಸಿದ್ದರೆ, ಇದೀಗ ರೋಹಿತ್ ಶರ್ಮಾ 113 ಫೋರ್ಗಳನ್ನು ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಹಾಗೆಯೇ ಟಿ20 ವಿಶ್ವಕಪ್ನಲ್ಲಿ 50 ಸಿಕ್ಸ್ಗಳನ್ನು ಬಾರಿಸಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 31 ಇನಿಂಗ್ಸ್ಗಳಲ್ಲಿ 63 ಸಿಕ್ಸ್ ಸಿಡಿಸಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದರೆ, ಇದೀಗ 43 ಇನಿಂಗ್ಸ್ಗಳಲ್ಲಿ 50 ಸಿಕ್ಸ್ ಪೂರೈಸಿ ರೋಹಿತ್ ಶರ್ಮಾ ದ್ವಿತೀಯ ಸ್ಥಾನಕ್ಕೇರಿದ್ದಾರೆ.



















