
ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದು, ಆ ಬಳಿಕ ಮಿನಿ ವಿಶ್ವಸಮರ ಆರಂಭವಾಗುತ್ತಿದೆ. 2024 ರ ಟಿ20 ವಿಶ್ವಕಪ್ ಜೂನ್ 1 ರಿಂದ ಆರಂಭವಾಗಲಿದ್ದು, ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸಲಿವೆ. 20 ತಂಡಗಳ ನಡುವೆ ನಡೆಯಲ್ಲಿರುವ ಈ ಟೂರ್ನಿಗೆ ಇನ್ನಷ್ಟೇ ಎಲ್ಲಾ ತಂಡಗಳನ್ನು ಪ್ರಕಟಿಸಬೇಕಿದೆ.

ವಾಸ್ತವವಾಗಿ ಈಗ ನಡೆಯುತ್ತಿರುವ ಐಪಿಎಲ್ ಮೇ 26 ರಂದು ಕೊನೆಗೊಳ್ಳುತ್ತದೆ. ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದಲ್ಲದೆ ಟೀಂ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಟೀಂ ಇಂಡಿಯಾ ಆಟಗಾರರು ಈ ಟೂರ್ನಿಗೆ ಯಾವಾಗ ಹೊರಡುತ್ತಾರೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಐಪಿಎಲ್ ನಡುವೆಯೇ ಟಿ20 ವಿಶ್ವಕಪ್‌ಗಾಗಿ ಭಾರತೀಯ ಆಟಗಾರರು ಅಮೆರಿಕಕ್ಕೆ ತೆರಳಲ್ಲಿದ್ದು, ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಭಾರತ ತಂಡ ಮೇ 21 ರಂದು ಅಮೆರಿಕಕ್ಕೆ ತೆರಳಲಿದೆ.

ವರದಿ ಪ್ರಕಾರ ಭಾರತ ತಂಡವು ವಿವಿಧ ಬ್ಯಾಚ್‌ಗಳಲ್ಲಿ ಟಿ20 ವಿಶ್ವಕಪ್‌ಗಾಗಿ ಅಮೆರಿಕಗೆ ತೆರಳಲಿದೆ. ಹೀಗಾಗಿ ವಿಶ್ವಕಪ್ ಆಡಲಿರುವ ಮೊದಲ ಬ್ಯಾಚ್ನಲ್ಲಿ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆಯದ ತಂಡಗಳ ಭಾರತೀಯ ಆಟಗಾರರು ಅಮೆರಿಕಕ್ಕೆ ಹೋಗಲಿದ್ದಾರೆ.

ಇನ್ನು ಈ ಟಿ20 ವಿಶ್ವಕಪ್‌ಗಾಗಿ ಮೇ 1 ರೊಳಗೆ ಎಲ್ಲಾ ತಂಡಗಳು ತಮ್ಮ ತಂಡಗಳನ್ನು ಪ್ರಕಟಿಸಲು ಐಸಿಸಿ ಗಡುವು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಶೀಘ್ರದಲ್ಲೇ ಭಾರತ ತಂಡವನ್ನು ಪ್ರಕಟಿಸಬಹುದು. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ರೋಹಿತ್ ಶರ್ಮಾ ಅವರ ಸ್ಥಾನ ಖಚಿತವಾಗಿದೆ.