T20I World Cup 2024: ಟಿ20 ವಿಶ್ವಕಪ್‌ಗೆ ಸೌತ್ ಆಫ್ರಿಕಾ ತಂಡ ಪ್ರಕಟ
South Africa T20 Squad: ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಸೌತ್ ಆಫ್ರಿಕಾ ತಂಡವನ್ನು ಘೋಷಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಮಾಜಿ ನಾಯಕ ಟೆಂಬಾ ಬವುಮಾ ಹಾಗೂ ರೈಲಿ ರೊಸ್ಸೊ ಸ್ಥಾನ ಪಡೆದಿಲ್ಲ. ಇನ್ನು ವೇಗಿಗಳಾದ ಲುಂಗಿ ಎನ್ಗಿಡಿ ಹಾಗೂ ನಾಂಡ್ರೆ ಬರ್ಗರ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.
Updated on: Apr 30, 2024 | 3:11 PM

T20I World Cup 2024: ಈ ಬಾರಿಯ ಟಿ20 ವಿಶ್ವಕಪ್ಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ. ಈ ಹದಿನೈದು ಸದಸ್ಯರ ಬಳಗದಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕೆಲ್ಟನ್ಗೆ ಸ್ಥಾನ ಲಭಿಸಿರುವುದು ವಿಶೇಷ.

ಈವರೆಗೆ ಸೌತ್ ಆಫ್ರಿಕಾ ಪರ ಯಾವುದೇ ಪಂದ್ಯವಾಡದ ರಿಯಾನ್ ಈ ಬಾರಿಯ ಎಸ್ಎ ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಿಯಾನ್ ರಿಕೆಲ್ಟನ್ 530 ರನ್ ಬಾರಿಸಿ ಮಿಂಚಿದ್ದರು. ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ಇದೀಗ ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹಾಗೆಯೇ ನಿರಂತರ ಗಾಯಗಳಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೌತ್ ಆಫ್ರಿಕಾ ಟಿ20 ತಂಡದಿಂದ ಹೊರಗುಳಿದಿದ್ದ ಅನ್ರಿಕ್ ನೋಕಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ನೋಕಿಯಾ ಕಳಪೆ ಪ್ರದರ್ಶನ ನೀಡಿದ್ದಾರೆ. ಇದಾಗ್ಯೂ 30 ವರ್ಷದ ವೇಗಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಇನ್ನು ತಂಡದಲ್ಲಿ ಸ್ಟಾರ್ ಬ್ಯಾಟರ್ಗಳಾಗಿ ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್ ಕಾಣಿಸಿಕೊಂಡರೆ, ಬೌಲರ್ಗಳಾಗಿ ಜೆರಾಲ್ಡ್ ಕೊಟ್ಝಿಯ, ಕಗಿಸೊ ರಬಾಡ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ ತಂಡದಲ್ಲಿದ್ದಾರೆ. ಅದರಂತೆ ಸೌತ್ ಆಫ್ರಿಕಾ ಟಿ20 ವಿಶ್ವಕಪ್ ತಂಡ ಈ ಕೆಳಗಿನಂತಿದೆ.

ಟಿ20 ವಿಶ್ವಕಪ್‌ಗೆ ಸೌತ್ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ , ರೀಝ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ರಿಯಾನ್ ರಿಕೆಲ್ಟನ್, ಕಗಿಸೊ ರಬಾಡ , ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್ , ಜಾರ್ನ್ ಫೋರ್ಚುಯಿನ್, ಜೆರಾಲ್ಡ್ ಕೊಟ್ಝಿಯ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ , ಒಟ್ನಿಯೆಲ್ ಬಾರ್ಟ್‌ಮ್ಯಾನ್.
