
ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಐಸಿಸಿ ಈಗಾಗಲೇ ತನ್ನ ಸಿದ್ಧತೆಗಳನ್ನು ಆರಂಭಿಸಿದೆ. ಈ ಟೂರ್ನಿಯ ಲೀಗ್ ಹಂತದ ಪಂದ್ಯಗಳ ಟಿಕೆಟ್ಗಳನ್ನು ಸಹ ಮಾರಾಟಕ್ಕಿಡಲಾಗಿದೆ. ವಾಸ್ತವವಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಪಂದ್ಯದಂದು ಐಸಿಸಿ, ಟಿ20 ವಿಶ್ವಕಪ್ ಟಿಕೆಟ್‌ಗಳ ಮಾರಾಟವನ್ನು ಅಧಿಕೃತವಾಗಿ ಆರಂಭಿಸಿದೆ.

20 ತಂಡಗಳ ನಡುವೆ ನಡೆಯಲಿರುವ ಈ ಮಿನಿ ವಿಶ್ವಕಪ್ ಸಮರಕ್ಕೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸುತ್ತಿವೆ. ನೆರೆಯ ರಾಷ್ಟ್ರ ಪಾಕಿಸ್ತಾನ ತಂಡ ಭಾರತಕ್ಕೆ ಬರದಿರುವ ಕಾರಣ, ಪಾಕಿಸ್ತಾನದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿದೆ. ಟಿ20 ವಿಶ್ವಕಪ್ ಆತಿಥ್ಯ ಭಾರತದ ಪಾಲಾಗಿರುವುದನ್ನು ಅರಗಿಸಿಕೊಳ್ಳದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಈ ಟೂರ್ನಿ ಆರಂಭಕ್ಕೂ ಮುನ್ನವೇ ತನ್ನ ಖ್ಯಾತೆ ಶುರು ಮಾಡಿದೆ.

ವಾಸ್ತವವಾಗಿ ಐಸಿಸಿ, ಟಿ20 ವಿಶ್ವಕಪ್ ಟಿಕೆಟ್‌ಗಳ ಮಾರಾಟಕ್ಕಾಗಿ ಬಿಡುಗಡೆ ಮಾಡಲಾದ ಪ್ರಚಾರ ಪೋಸ್ಟರ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರ ಫೋಟೋವನ್ನು ಸೇರಿಸದಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಐಸಿಸಿ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಚಾರ ಪೋಸ್ಟರ್‌ನಲ್ಲಿ ಕೇವಲ ಐದು ತಂಡಗಳ ನಾಯಕರ ಫೋಟೋವನ್ನು ಮಾತ್ರ ಬಳಸಿರುವುದನ್ನು ಉಲ್ಲೇಖಿಸಿ ಐಸಿಸಿಗೆ ಈ ಬಗ್ಗೆ ತಿಳಿಸಲಾಗಿದೆ ಎಂದು ಪಿಸಿಬಿಯ ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ ಎಂದು ವರದಿಯಾಗಿದೆ. ಈ ಪೋಸ್ಟರ್‌ನಲ್ಲಿ ಸೂರ್ಯಕುಮಾರ್ ಯಾದವ್ (ಭಾರತ), ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ದಾಸುನ್ ಶನಕ (ಶ್ರೀಲಂಕಾ) ಮತ್ತು ಹ್ಯಾರಿ ಬ್ರೂಕ್ (ಇಂಗ್ಲೆಂಡ್) ಅವರ ಫೋಟೋವನ್ನು ಮಾತ್ರ ಬಳಸಲಾಗಿದೆ.

ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪಿಸಿಬಿ, ಕೆಲವು ತಿಂಗಳ ಹಿಂದೆ ನಡೆದಿದ್ದ ಏಷ್ಯಾಕಪ್ನಲ್ಲೂ ನಾವು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದೇವು. ಆ ಸಮಯದಲ್ಲೂ ಪ್ರಸಾರಕರು ನಮ್ಮ ತಂಡದ ನಾಯಕನ ಫೋಟೋವನ್ನು ಹಾಕದೆ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ ಆ ಬಳಿಕ ಪಿಸಿಬಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜೊತೆ ಮಾತನಾಡಿದ ನಂತರವೇ ಪರಿಸ್ಥಿತಿ ಬದಲಾಯಿತು.

ಇದೀಗ ಐಸಿಸಿ ಟಿಕೆಟ್ ಮಾರಾಟಕ್ಕಾಗಿ ಬಿಡುಗಡೆ ಮಾಡಿದ ಪ್ರಚಾರ ಪೋಸ್ಟರ್‌ಗಳಲ್ಲಿ ನಮ್ಮ ತಂಡದ ನಾಯಕನ ಫೋಟೋವನ್ನು ಬಳಸಿಲ್ಲ. ಐಸಿಸಿ ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನವು ಅಗ್ರ ಐದು ತಂಡಗಳಲ್ಲಿ ಇಲ್ಲದಿರಬಹುದು, ಆದರೆ ಅದು ಶ್ರೀಮಂತ ಇತಿಹಾಸವನ್ನು ಹೊಂದಿದೆ ಮತ್ತು ವಿಶ್ವಕಪ್‌ನಲ್ಲಿ ಹೆಚ್ಚು ಗಮನ ಸೆಳೆಯುವ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಐಸಿಸಿ, ಪಾಕಿಸ್ತಾನ ತಂಡದ ನಾಯಕನನ್ನು ಪ್ರಚಾರ ಪೋಸ್ಟರ್‌ಗಳು ಮತ್ತು ಅಭಿಯಾನಗಳಲ್ಲಿ ಖಂಡಿತವಾಗಿಯೂ ಸೇರಿಸುತ್ತದೆ ಎಂದು ಪಿಸಿಬಿ ವಿಶ್ವಾಸ ಹೊಂದಿದೆ ಎಂದಿದೆ.
Published On - 6:07 pm, Sat, 13 December 25