
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 12 ರನ್ಗಳ ರೋಚಕ ಜಯ ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ರಾಯ್ಪುರಕ್ಕೆ ಬಂದಿಳಿದಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಜನವರಿ 21 ರಂದು ರಾಯ್‌ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಮೊದಲ ಏಕದಿನ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಾಯಿತು. ಆ ಪಂದ್ಯದಲ್ಲಿ ಒಟ್ಟು 686 ರನ್ ಹರಿದುಬಂದವು. ಭಾರತವು 8 ವಿಕೆಟ್‌ಗಳಿಗೆ 349 ರನ್ ಗಳಿಸಿತು, ನಂತರ ನ್ಯೂಜಿಲೆಂಡ್ ತಂಡ 49.2 ಓವರ್‌ಗಳಲ್ಲಿ 337 ರನ್‌ಗಳಿಗೆ ಆಲೌಟ್ ಆಗಿ ಗೆಲುವಿನ ಅಂಚಿನಲ್ಲಿ ಎಡವಿತು.

ಭಾರತ ಪರ ಕೊನೆಯ ವರೆಗೂ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ಕೇವಲ 145 ಎಸೆತಗಳಲ್ಲಿ 200 ರನ್ ಕಲೆಹಾಕಿದರು. ಒಟ್ಟಾರೆಯಾಗಿ 149 ಎಸೆತಗಳಲ್ಲಿ 19 ಫೋರ್, 9 ಸಿಕ್ಸರ್ನೊಂದಿಗೆ 208 ರನ್ ಚಚ್ಚಿದರು. ಕಿವೀಸ್ ಪರ ಮಿಚೆಲ್ ಬ್ರೇಸ್‌ವೆಲ್ 140 ರನ್ ಬಾರಿಸಿ ಅಬ್ಬರದ ಶತಕದಾಟ ಆಡಿದರು.

ಎರಡನೇ ಏಕದಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ. 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ. ಗೆದ್ದ ತಂಡದ ಆಟಗಾರರೇ ಕಣಕ್ಕಿಳಿಯುವ ಸಾಧ್ಯತೆ ಇದೆ.

ರಾಯ್‌ಪುರ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ. ಬೌಲರ್‌ಗಳು ಸಹ ಈ ಪಿಚ್‌ನ ಸಹಾಯ ಪಡೆಯುತ್ತಾರೆ. ಸ್ಪೀಡ್ ಬಾಲ್ ಮತ್ತು ಬೌನ್ಸ್ ಎರಡನ್ನೂ ಪಡೆಯಬಹುದು.

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ರಾಯ್‌ಪುರದ ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಬಹುದು. ರಾತ್ರಿಯಲ್ಲಿ ತಾಪಮಾನವು 16 ಡಿಗ್ರಿ ಇರಲಿದೆ. ಹೀಗಾಗಿ ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯಿಲ್ಲ ಎಂದು ಊಹಿಸಲಾಗಿದೆ.