ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಭಾರತ ಜಯಭೇರಿ ಬಾರಿಸಿದೆ. ಆದರೆ ಈ ಬಾರಿ ಗೆದ್ದಿರುವುದು ಬರೋಬ್ಬರಿ 150 ರನ್ಗಳ ಅಂತರದಿಂದ. ಇಂತಹದೊಂದು ಅಮೋಘ ಗೆಲುವಿಗೆ ಕಾರಣವಾಗಿದ್ದು ಭಾರತೀಯ ಬ್ಯಾಟರ್ಗಳ ಸ್ಪೋಟಕ ಬ್ಯಾಟಿಂಗ್. ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಟೀಮ್ ಇಂಡಿಯಾ ಪವರ್ಪ್ಲೇನಲ್ಲೇ ಪವರ್ಫುಲ್ ದಾಖಲೆಯನ್ನು ಸಹ ಬರೆದಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರ ತಪ್ಪು ಎಂಬಂತೆ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ ಆಂಗ್ಲ ಬೌಲರ್ಗಳನ್ನು ಚೆಂಡಾಡಿದರು. ಪರಿಣಾಮ ಅಭಿಷೇಕ್ ಬ್ಯಾಟ್ನಿಂದ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.
ಈ ಅರ್ಧಶತಕದೊಂದಿಗೆ ಆರ್ಭಟ ಮುಂದುವರೆಸಿದ ಅಭಿಷೇಕ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಮೊದಲ 6 ಓವರ್ಗಳಲ್ಲೇ ಟೀಮ್ ಇಂಡಿಯಾ 1 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು. ಇದರೊಂದಿಗೆ ಪವರ್ಪ್ಲೇನಲ್ಲಿ ಪವರ್ಫುಲ್ ದಾಖಲೆಯೊಂದು ಭಾರತ ತಂಡದ ಪಾಲಾಯಿತು.
ಹೌದು, ಇದು ಪವರ್ಪ್ಲೇನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ ಗರಿಷ್ಠ ಸ್ಕೋರ್. 2024 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ 6 ಓವರ್ಗಳಲ್ಲಿ 82 ರನ್ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಪವರ್ಪ್ಲೇನಲ್ಲಿ ಬರೋಬ್ಬರಿ 95 ರನ್ ಸಿಡಿಸಿ ಟೀಮ್ ಇಂಡಿಯಾ ಪವರ್ಫುಲ್ ದಾಖಲೆಯನ್ನು ಬರೆದಿದೆ.
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. 2024 ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸೀಸ್ ಪಡೆ ಮೊದಲ 6 ಓವರ್ಗಳಲ್ಲಿ 113 ರನ್ ಬಾರಿಸಿರುವುದು ಶ್ರೇಷ್ಠ ದಾಖಲೆ.
ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆ ಸನ್ರೈಸರ್ಸ್ ಹೈದರಾಬಾದ್ ತಂಡದ ಹೆಸರಿನಲ್ಲಿದೆ. ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವು ಪವರ್ಪ್ಲೇನಲ್ಲಿ 125 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇದೀಗ ಟೀಮ್ ಇಂಡಿಯಾ ಮೊದಲ 6 ಓವರ್ಗಳಲ್ಲೇ 95 ರನ್ ಸಿಡಿಸಿ ಪವರ್ಪ್ಲೇನಲ್ಲಿ ಪವರ್ಫುಲ್ ಬ್ಯಾಟಿಂಗ್ ಪ್ರದರ್ಶಿಸಿದ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪವರ್ಫುಲ್ ಬ್ಯಾಟಿಂಗ್ ಪರಿಣಾಮ ಭಾರತ ತಂಡವು 20 ಓವರ್ಗಳಲ್ಲಿ 247 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೇವಲ 97 ರನ್ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗ ಅನುಭವಿಸಿದೆ.
Published On - 7:23 am, Mon, 3 February 25