- Kannada News Photo gallery Cricket photos India registered their second biggest win in T20Is, by runs
150 ರನ್ಗಳ ಜಯ… ಇದು ಭಾರತ ತಂಡದ ಅಮೋಘ ಗೆಲುವಲ್ಲ..!
India vs England T20I: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ಮೂರನೇ ಮ್ಯಾಚ್ನಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ.
Updated on:Feb 03, 2025 | 9:54 AM

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಕೊನೆಯ ಮ್ಯಾಚ್ನಲ್ಲಿ ಭಾರತ ತಂಡವು 150 ರನ್ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ (135) ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿತು.

248 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (55) ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು 10.3 ಓವರ್ಗಳಲ್ಲಿ 97 ರನ್ ಬಾರಿಸಿ ಆಲೌಟ್ ಆಯಿತು.

ಈ ಮೂಲಕ ಟೀಮ್ ಇಂಡಿಯಾ 150 ರನ್ಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದಾಗ್ಯೂ ಇದು ಟಿ20 ಪಂದ್ಯದಲ್ಲಿ ಭಾರತ ತಂಡದ ಅಮೋಘ ಗೆಲುವಲ್ಲ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ದಾಖಲೆಯ ಗೆಲುವು ದಾಖಲಿಸಿರುವುದು ನ್ಯೂಝಿಲೆಂಡ್ ವಿರುದ್ಧ.

2023ರಲ್ಲಿ ಅಹಮದಾಬಾದ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 234 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 66 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ತಂಡವು 168 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು.

ಈ 168 ರನ್ಗಳ ಜಯವೇ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಅಮೋಘ ಗೆಲುವು. ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ಗಳ ಅಂತರದಿಂದ ಗೆದ್ದ ವಿಶ್ವ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿದೆ. 2024 ರಲ್ಲಿ ಗಾಂಬಿಯಾ ವಿರುದ್ಧ ಝಿಂಬಾಬ್ವೆ 290 ರನ್ಗಳ ಅಂತರದಿಂದ ಗೆದ್ದು ಈ ವಿಶ್ವ ದಾಖಲೆ ನಿರ್ಮಿಸಿದೆ.
Published On - 9:53 am, Mon, 3 February 25



















