
ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (MI) ಇದೀಗ ಮತ್ತೊಂದು ಲೀಗ್ಗೆ ಕಾಲಿಟ್ಟಿದೆ. ಅದು ಕೂಡ ದೂರದ ಇಂಗ್ಲೆಂಡ್ನಲ್ಲಿ ನಡೆಯುವ ದಿ ಹಂಡ್ರೆಡ್ ಲೀಗ್ನಲ್ಲಿ. ಹೌದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 100 ಎಸೆತಗಳ ಟೂರ್ನಿಯಲ್ಲಿ MI ಲಂಡನ್ ಹೆಸರಿನ ತಂಡವೊಂದನ್ನು ಕಣಕ್ಕಿಳಿಸಲಿದೆ.

ರಿಲಯನ್ಸ್ ಒಡೆತನದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನಲ್ಲಿದ್ದ ಓವಲ್ ಇನ್ವಿನ್ಸಿಬಲ್ ತಂಡದ ಶೇ. 49 ರಷ್ಟು ಪಾಲನ್ನು ಖರೀದಿಸಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಓವಲ್ ಇನ್ವಿನ್ಸಿಬಲ್ ಬದಲಾಗಿ ಎಂಐ ಲಂಡನ್ ಹೆಸರಿನಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದೆ.

ವಿಶೇಷ ಎಂದರೆ ಇದು MI ಫ್ರಾಂಚೈಸಿಯ 6ನೇ ತಂಡ. ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್ಗಳಲ್ಲಿ ಮುಂಬೈ ಇಂಡಿಯನ್ಸ್ ಪುರುಷ/ಮಹಿಳಾ ತಂಡಗಳನ್ನು ಕಣಕ್ಕಿಳಿಸುತ್ತಿರುವ ರಿಲಯನ್ಸ್ ಕಂಪೆನಿಯು, ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಎಂಐ ಕೇಪ್ಟೌನ್ ಹೆಸರಿನ ತಂಡವನ್ನು ಹೊಂದಿದೆ. ಹಾಗೆಯೇ ಯುಎಇ ಕ್ರಿಕೆಟ್ ಬೋರ್ಡ್ ಯೋಜಿಸುವ ಇಂಟರ್ನ್ಯಾನಲ್ ಲೀಗ್ ಟಿ20 ಟೂರ್ನಿಯಲ್ಲಿ ಎಂಐ ಎಮಿರೇಟ್ಸ್ ತಂಡ ಕಣಕ್ಕಿಳಿಯುತ್ತಿದೆ. ಇನ್ನು ಯುಎಸ್ಎನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಎಂಐ ನ್ಯೂಯಾರ್ಕ್ ಹೆಸರಿನ ತಂಡವನ್ನು ಕಣಕ್ಕಿಳಿಸುತ್ತಿದೆ. ಈ ಮೂಲಕ ವಿಶ್ವದ ಪ್ರಮುಖ ಲೀಗ್ಗಳಲ್ಲಿ ರಿಲಯನ್ಸ್ ಒಡೆತನದ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್ ಒಟ್ಟು 6 ತಂಡಗಳನ್ನು ಹೊಂದಿದೆ.

ಇನ್ನು ಮುಂಬೈ ಇಂಡಿಯನ್ಸ್ ಅಲ್ಲದೆ ದಿ ಹಂಡ್ರೆಡ್ ಲೀಗ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ತಂಡ ಕೂಡ ಕಣಕ್ಕಿಳಿಯಲಿದೆ. ಮ್ಯಾಂಚೆಸ್ಟರ್ ಒರಿಜಿನಲ್ಸ್ ಫ್ರಾಂಚೈಸಿಯ ಶೇ.70 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ.

ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ದಿ ಹಂಡ್ರೆಡ್ ಲೀಗ್ನಲ್ಲಿ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಯಾರ್ಕ್‌ಷೈರ್ ಒಡೆತನದಲ್ಲಿದ್ದ ನಾರ್ದನ್ ಸೂಪರ್‌ಚಾರ್ಜರ್ಸ್‌ನ ಸಂಪೂರ್ಣ ಪಾಲನ್ನು ಸನ್ ಗ್ರೂಪ್ ಖರೀದಿಸಿದೆ. ಇದೀಗ ನಾರ್ದನ್ ಸೂಪರ್ಚಾರ್ಜರ್ಸ್ ಹೆಸರು ಬದಲಿಸಿ ತಮ್ಮ ತಂಡಕ್ಕೆ ಸನ್ರೈಸರ್ಸ್ ಲೀಡ್ಸ್ ಎಂದು ಮರುನಾಮಕರಣ ಮಾಡಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕರಾದ ಜಿಎಂಆರ್ ಗ್ರೂಪ್ ಕೂಡ ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟಿದ್ದು, ಸದರ್ನ್ ಬ್ರೇವ್ ಫ್ರಾಂಚೈಸಿಯ ಶೇಕಡಾ 49 ರಷ್ಟು ಪಾಲನ್ನು ಖರೀದಿಸಿದೆ. ಅದರಂತೆ ಮುಂಬರುವ ಸೀಸನ್ನಲ್ಲಿ ಕ್ಯಾಪಿಟಲ್ಸ್ ಪಡೆ ಕೂಡ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದೆ.