
ಕ್ರಿಕೆಟ್ ಅಂಗಳದಲ್ಲಿ ನೀವು ನಾನಾ ರೀತಿಯ ದಾಖಲೆಗಳನ್ನು ನೋಡಿರುತ್ತೀರಿ. ಅದರಲ್ಲಿ ಮುಖ್ಯವಾಗಿ ಬ್ಯಾಟ್ಸ್ಮನ್ಗಳ ವೇಗದ ಶತಕ ಹಾಗೂ ಬೌಲರುಗಳ ಹ್ಯಾಟ್ರಿಕ್ ವಿಕೆಟ್ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಇಲ್ಲೊಬ್ಬರು ಬೌಲರ್ ಬರೀ ಓವರ್ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಹೌದು, ಕ್ರಿಕೆಟ್ ಇತಿಹಾಸದಲ್ಲಿ 10 ಓವರ್‌ಗಳನ್ನು ಮೇಡನ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ ಕೇಶ ರಾಜದುರೈ. ಲಂಡನ್ನಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್ ಲೀಗ್ ಇಂತಹದೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.

ಬ್ಯಾಪ್‌ಚೈಲ್ಡ್ ಕ್ರಿಕೆಟ್ ಕ್ಲಬ್ ಹಾಗೂ ಬೊರ್ಸ್ಟಲ್ ಕ್ರಿಕೆಟ್ ಕ್ಲಬ್ ನಡುವಣ ಏಕದಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ಮೂಡಿಬಂದಿದೆ. ಟಾಸ್ ಗೆದ್ದ ಬ್ಯಾಪ್‌ಚೈಲ್ಡ್ ಕ್ಲಬ್ ತಂಡವು 46.1 ಓವರ್‌ಗಳಲ್ಲಿ 165 ರನ್ ಗಳಿಸಿ ಆಲೌಟ್ ಆಯಿತು. 108 ಎಸೆತಗಳನ್ನು ಎದುರಿಸಿದ ರಿಕಿ ಡೇಲ್ 47 ರನ್ ಬಾರಿಸಿದರೆ, ಕ್ಯಾಲಮ್ ಲಿಯರಿ 43 ರನ್ ಗಳಿಸಿದರು. ಬೊರ್ಸ್ಟಲ್ ತಂಡದ ಐವರು ಬೌಲರುಗಳು ತಲಾ 2 ವಿಕೆಟ್ ಪಡೆದು ಮಿಂಚಿದರು.

166 ರನ್ಗಳ ಗುರಿಯನ್ನು ಬೆನ್ನತ್ತಿದ ಬೊರ್ಸ್ಟಲ್ ಮೊದಲ ವಿಕೆಟ್ಗೆ 56 ರನ್ಗಳಿಸಿ ಉತ್ತಮ ಆರಂಭ ಪಡೆದಿತ್ತು. ಆದರೆ ಯಾವಾಗ ಕೇಶ ರಾಜದುರೈ ದಾಳಿಗಿಳಿದರೋ ಇಡೀ ಪಂದ್ಯದ ಚಿತ್ರಣ ಬದಲಾಯಿತು. ತಮ್ಮ ಆಫ್ ಸ್ಪಿನ್ ಮೋಡಿ ಮೂಲಕ ಬ್ಯಾಟ್ಸ್ಮನ್ಗಳನ್ನು ಇಕ್ಕಟಿಗೆ ಸಿಲುಕಿಸಿದ ರಾಜದುರೈ ಒಂದೇ ಒಂದು ರನ್ ನೀಡಲಿಲ್ಲ.

ಅದರಂತೆ ಅಂತಿಮವಾಗಿ ಕೇಶ ರಾಜದುರೈ ತಮ್ಮ 10 ಓವರ್‌ಗಳನ್ನು ಪೂರೈಸಿದರು. ಆದರೆ ಒಂದೇ ಒಂದು ರನ್ ನೀಡಿರಲಿಲ್ಲ ಎಂಬುದು ಇಲ್ಲಿ ವಿಶೇಷ. ಅಂದರೆ, 60 ಎಸೆತಗಳಲ್ಲಿ ಬ್ಯಾಟ್ಸ್‌ಮನ್ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇನ್ನು 10 ಮೇಡನ್ ಓವರ್ ನಡುವೆ 2 ವಿಕೆಟ್ ಪಡೆದು ಸಹ ಮಿಂಚಿದರು. ರಾಜದುರೈಯ ಸ್ಪಿನ್ ಮೋಡಿಗೆ ಸಿಲುಕಿದ ಬೊರ್ಸ್ಟಲ್ ತಂಡವು 44.4 ಓವರ್‌ಗಳಲ್ಲಿ 121 ರನ್ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಬ್ಯಾಪ್‌ಚೈಲ್ಡ್ ತಂಡವು 44 ರನ್ಗಳ ಜಯ ಸಾಧಿಸಿತು.