CPL 2021: ಸ್ಪೋಟಕ ಶತಕದೊಂದಿಗೆ ಡುಪ್ಲೆಸಿಸ್ ಕಂಬ್ಯಾಕ್: ಸಿಪಿಎಲ್ನಲ್ಲಿ ಹೊಸ ದಾಖಲೆ
Faf du Plessis: 224 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡ 16.5 ಓವರ್ ಗಳಲ್ಲಿ ಕೇವಲ 124 ರನ್ ಗಳಿಗೆ ಆಲೌಟ್ ಆದರು. ಇದರೊಂದಿಗೆ ಸೇಂಟ್ ಲೂಸಿಯಾ ತಂಡ 100 ರನ್ಗಳ ಭರ್ಜರಿ ಜಯ ಸಾಧಿಸಿತು.
Updated on:Sep 05, 2021 | 8:10 PM

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ಮನ್ ಫಾಫ್ ಡುಪ್ಲೆಸಿಸ್ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಗಾಯಗೊಂಡು ಕೆಲ ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದಾದ ಬಳಿಕ ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಂಡರೂ ಫಾಫ್ ಎಂದಿನ ಆಟ ಮೂಡಿ ಬಂದಿರಲಿಲ್ಲ.

ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಹಳೆಯ ಚಾರ್ಮ್ ಅನ್ನು ತೋರಿಸಿದ್ದಾರೆ. ಸಿಪಿಎಲ್ನ 15ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಹಾಗೂ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮುಖಾಮುಖಿಯಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ ಪರ ಫಾಫ್ ಡು ಪ್ಲೆಸಿಸ್ ಹಾಗೂ ಫ್ಲೆಚರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಮೊದಲ ವಿಕೆಟ್ಗೆ 76 ರನ್ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಇದಾದ ಬಳಿಕ ಸೇಂಟ್ ಲೂಸಿಯಾ 2 ವಿಕೆಟ್ ಕಳೆದುಕೊಂಡರೂ ಒಂದೆಡೆ ಡುಪ್ಲೆಸಿಸ್ ಗಟ್ಟಿಯಾಗಿ ನೆಲೆಯೂರಿದ್ದರು. ಅಲ್ಲದೆ ಸೇಂಟ್ ಕಿಟ್ಸ್ ಬೌಲರುಗಳ ಬೆಂಡೆತ್ತಿದ್ದ ಫಾಫ್ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. ಅದರಂತೆ 60 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್ ಸಿಡಿಸಿ 120 ರನ್ ಚಚ್ಚಿದರು. ಡುಪ್ಲೆಸಿಸ್ ಅಬ್ಬರ ನೆರವಿನಿಂದ ಸೇಂಟ್ ಲೂಸಿಯಾ ತಂಡವು 2 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು.

ಇನ್ನು ಬಿರುಸಿನ ಬ್ಯಾಟಿಂಗ್ ಮೂಲಕ 120 ರನ್ ಬಾರಿಸಿದ ಡುಪ್ಲೆಸಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ದಾಖಲೆ ಬರೆದರು. ಸಿಪಿಎಲ್ನಲ್ಲಿ ಅತ್ಯಧಿಕ ರನ್ ವೈಯುಕ್ತಿಕ ಮೊತ್ತ ಬಾರಿಸಿದ ವಿದೇಶಿ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆಯು ಗ್ಲೆನ್ ಫಿಲಿಪ್ಸ್ ಹೆಸರಿನಲ್ಲಿತ್ತು. ಫಿಲಿಪ್ಸ್ 2018 ರಲ್ಲಿ ಜಮೈಕಾ ಪರ 103 ರನ್ ಗಳಿಸಿದ್ದು ಸಿಪಿಎಲ್ನ ವಿದೇಶಿ ಆಟಗಾರ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ 120 ರನ್ ಬಾರಿಸುವ ಮೂಲಕ ಫಾಫ್ ಡುಪ್ಲೆಸಿಸ್ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ 224 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ 16.5 ಓವರ್ ಗಳಲ್ಲಿ ಕೇವಲ 124 ರನ್ ಗಳಿಗೆ ಆಲೌಟ್ ಆದರು. ಇದರೊಂದಿಗೆ ಸೇಂಟ್ ಲೂಸಿಯಾ 100 ರನ್ಗಳ ಭರ್ಜರಿ ಜಯ ಸಾಧಿಸಿತು.
Published On - 5:54 pm, Sun, 5 September 21




