Updated on: Jun 24, 2023 | 11:02 PM
TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ನ 14ನೇ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ನಾಯಕ ಅರುಣ್ ಕಾರ್ತಿಕ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ನಾಯಕ ಜಗದೀಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಆದರೆ ಚೆಪಾಕ್ ಸೂಪರ್ ಗಿಲ್ಲೀಸ್ ತಂಡಕ್ಕೆ ನಿರೀಕ್ಷಿತ ಆರಂಭ ದೊರೆತಿರಲಿಲ್ಲ. ಆರಂಭಿಕರಾದ ಪ್ರದೋಶ್ ಪೌಲ್ (2) ಹಾಗೂ ಎನ್ ಜಗದೀಸನ್ (15) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ತಂಡಕ್ಕೆ ಆಸರೆಯಾದರು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಅಪರಜಿತ್ ಆ ಬಳಿಕ ರನ್ ಗತಿ ಹೆಚ್ಚಿಸಲು ಮುಂದಾದರು. ಅದರಂತೆ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಅಲ್ಲದೆ 51 ಎಸೆತಗಳಲ್ಲಿ 79 ರನ್ ಬಾರಿಸಿದರು. ಅಪರಜಿತ್ ಅವರ ಈ ಅರ್ಧಶತಕದ ನೆರವಿನಿಂದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.
160 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ನಾಯಕ ಅರುಣ್ ಕಾರ್ತಿಕ್ ಬಿರುಸಿನ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ ಅರುಣ್ ಚೆಪಾಕ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಅರುಣ್ ಕಾರ್ತಿಕ್ ಬ್ಯಾಟ್ನಿಂದ 10 ಫೋರ್ ಹಾಗೂ 4 ಸಿಕ್ಸ್ಗಳು ಮೂಡಿಬಂತು. ಅಲ್ಲದೆ ತಂಡದ ಗೆಲುವಿಗೆ 5 ರನ್ಗಳು ಬೇಕಿದ್ದ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 61 ಎಸೆತಗಳಲ್ಲಿ ಶತಕ ಪೂರೈಸಿದರು.
ಅರುಣ್ ಕಾರ್ತಿಕ್ ಅವರ ಈ ಸೆಂಚುರಿ ಇನಿಂಗ್ಸ್ ನೆರವಿನಿಂದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 18.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 160 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.
ಇನ್ನು ಸೆಂಚುರಿ ಸಿಡಿಸಿ ಮಿಂಚಿದ ಅರುಣ್ ಕಾರ್ತಿಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.