
ಭಾರತ-ಪಾಕಿಸ್ತಾನ್ ನಡುವಣ ಹೈ-ವೋಲ್ಟೆಜ್ ಕದನಕ್ಕಾಗಿ ವೇದಿಕೆ ಸಜ್ಜಾಗಿದೆ. ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲ ರೋಚಕ ಪೈಪೋಟಿ ಕಂಡು ಬಂದಿದೆ. ಅದರಲ್ಲೂ ಮೈದಾನದಲ್ಲೇ ಆಟಗಾರರ ನಡುವೆ ಜಿದ್ದಾಜಿದ್ದಿ ಕಾಣಸಿಗುತ್ತದೆ. ಉಭಯ ತಂಡಗಳ ಆಟಗಾರರು ಒತ್ತಡ ತಾಳಲಾರದೆ ಪರಸ್ಪರ ಹಲ್ಲೆಗೆ ಮುಂದಾದ ಘಟನೆಗಳೂ ನಡೆದಿವೆ...ಹಾಗಿದ್ರೆ ಭಾರತ-ಪಾಕ್ ಆಟಗಾರರ ನಡುವೆ ಕಂಡು ಬಂದ ವಾಕ್ಸಮರಗಳಾವುವು ನೋಡೋಣ...

1992 ರ ವಿಶ್ವಕಪ್ನಲ್ಲಿನ ಜಾವೇದ್ ಮಿಯಾಂದಾದ್ ಮತ್ತು ಕಿರಣ್ ಮೋರೆ ನಡುವಿನ ಕಿತ್ತಾಟವನ್ನು ಕೂಡ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಭಾರತದ ವಿಕೆಟ್‌ಕೀಪರ್ ಆಗಿದ್ದ ಕಿರಣ್ ಮೋರೆ ಅಂಪೈರ್ಗೆ ಮನವಿ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಮಿಯಾಂದಾದ್ ಬೌಲರ್ ನನ್ನು ತಡೆದು ಕೀಪರ್ ಜೊತೆ ವಾಗ್ವಾದಕ್ಕಿಳಿದರು. ಆ ಬಳಿಕ ಮೋರೆ ಅವರನ್ನು ಅನುಕರಣೆ ಮಾಡುತ್ತಾ ಮಿಯಾಂದಾದ್ ಮೈದಾನದಲ್ಲಿ ಹುಚ್ಚೆದ್ದು ಕುಣಿದಾಡಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವಿಷಯ ಬಂದಾಗಲೆಲ್ಲ ವೆಂಕಟೇಶ್ ಪ್ರಸಾದ್ ಮತ್ತು ಅಮೀರ್ ಸೊಹೈಲ್ ಜಿದ್ದಾಜಿದ್ದಿ ಕಣ್ಮುಂದೆ ಬರುತ್ತೆ. 1996ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಸೊಹೈಲ್ ವೆಂಕಟೇಶ್ ಪ್ರಸಾದ್ ಅವರ ಎಸೆತಕ್ಕೆ ಬೌಂಡರಿ ಬಾರಿಸಿದರು. ಅಲ್ಲದೆ ನಂತರ ಬೌಂಡರಿ ಕಡೆಗೆ ಬ್ಯಾಟ್ ತೋರಿಸಿ ಅದೇ ರೀತಿಯಲ್ಲಿ ಹೊಡೆಯುತ್ತೇನೆ ಎಂದಿದ್ದರು. ಆದರೆ ಮುಂದಿನ ಎಸೆತದಲ್ಲಿ ಪ್ರಸಾದ್ ಅಮೀರ್ ಸೊಹೈಲ್ರನ್ನು ಕ್ಲೀನ್ ಬೌಲ್ಡ್ ಮಾಡಿ ಹೊರಗಟ್ಟಿದ್ದು ಈಗ ಇತಿಹಾಸ.

2010 ರಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತದ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ನಡುವೆ ವಾಗ್ವಾದ ನಡೆದಿತ್ತು. ಈ ಪಂದ್ಯದಲ್ಲಿ ಅಕ್ಮಲ್ ಗಂಭೀರ್ ವಿರುದ್ಧ ಎಲ್ ಬಿಡಬ್ಲ್ಯುಗೆ ಮನವಿ ಮಾಡಿದ್ದರು. ಇದಾದ ಬಳಿಕ ಇಬ್ಬರು ಆಟಗಾರರು ವಾಕ್ಸಮರಕ್ಕೆ ಇಳಿದರು. ಈ ವೇಳೆ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಧೋನಿ, ಅಂಪೈರ್‌ಗಳು ಇಬ್ಬರನ್ನು ಶಾಂತಗೊಳಿಸಿದರು.

ಈ ಹಿಂದೆ ಶಾಹಿದ್ ಅಫ್ರಿದಿ ಜತೆಗಿನ ಗಂಭೀರ್ ವಿವಾದ ಕೂಡ ಸಾಕಷ್ಟು ಸುದ್ದಿಯಾಗಿತ್ತು. 2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿತ್ತು. ಈ ಸರಣಿಯ ಪಂದ್ಯವೊಂದರಲ್ಲಿ ಅಫ್ರಿದಿ ಎಸೆತದಲ್ಲಿ ಗಂಭೀರ್ ರನ್ ಗಳಿಸಿದ್ದರು. ಈ ವೇಳೆ ಗಂಭೀರ್ ಅಫ್ರಿದಿ ಅವರನ್ನು ಗುದ್ದುವ ಮೂಲಕ ಜಗಳಕ್ಕಿಳಿದಿದ್ದರು.

2010ರ ಏಷ್ಯಾಕಪ್‌ನಲ್ಲಿ ಹರ್ಭಜನ್ ಸಿಂಗ್ ಮತ್ತು ಶೋಯೆಬ್ ಅಖ್ತರ್ ನಡುವಣ ವಾಕ್ಸಮರ ತಾರಕ್ಕೇರಿತ್ತು. ಇಬ್ಬರ ನಡುವೆ ಮೈದಾನದಲ್ಲಿ ಜಗಳವು ಭಾರತದ ಗೆಲುವಿನೊಂದಿಗೆ ಅಂತ್ಯಗೊಂಡಿತ್ತು. ಅಂದರೆ ಹರ್ಭಜನ್ ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ವಿಜಯವನ್ನು ತಂದುಕೊಟ್ಟಿದ್ದರು. ಆ ನಂತರ ಅಖ್ತರ್ ಕಡೆಗೆ ಸಾಗುತ್ತಾ ಸಂಭ್ರಮಿಸಿದ್ದರು. ಇದೇ ವೇಳೆ ಅಖ್ತರ್ ಹರ್ಭಜನ್ ಸಿಂಗ್ ಅವರನ್ನು ಹೊರಹೋಗುವಂತೆ ಸೂಚಿಸಿದರು.