Updated on: Jun 07, 2023 | 11:07 PM
WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾದ ಎಡಗೈ ದಾಂಡಿಗ 14 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಕೇವಲ 106 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಈ ಸ್ಪೋಟಕ ಶತಕದೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಟ್ರಾವಿಸ್ ಹೆಡ್ ಪಾಲಾಗಿದೆ. ಹಾಗೆಯೇ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಆಸ್ಟ್ರೇಲಿಯಾದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಭಾರತದ ವಿರುದ್ಧ ಡೇವಿಡ್ ವಾರ್ನರ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಸೆಂಚುರಿಸಿ ಸಿಡಿಸಿದ್ದರು. ಹಾಗಿದ್ರೆ ಟೀಮ್ ಇಂಡಿಯಾ ವಿರುದ್ಧ ಅತೀ ವೇಗದ ಟೆಸ್ಟ್ ಸೆಂಚುರಿ ಬಾರಿಸಿದ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ...
1- ಡೇವಿಡ್ ವಾರ್ನರ್: 2011 ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕೇವಲ 69 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಟೀಮ್ ಇಂಡಿಯಾ ವಿರುದ್ಧ ಮೂಡಿಬಂದ ಅತೀ ವೇಗದ ಟೆಸ್ಟ್ ಶತಕ ಎಂಬುದು ವಿಶೇಷ.
2- ಎಬಿ ಡಿವಿಲಿಯರ್ಸ್: 2010 ರಲ್ಲಿ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗ ಎಬಿ ಡಿವಿಲಿಯರ್ಸ್ ಸೆಂಚುರಿಯನ್ ಮೈದಾನದಲ್ಲಿ ಟೀಮ್ ಇಂಡಯಾ ವಿರುದ್ಧ ಕೇವಲ 75 ಎಸೆತಗಳಲ್ಲಿ ಶತಕ ಬಾರಿಸಿದ್ದರು.
3- ಶಾಹಿದ್ ಅಫ್ರಿದಿ: 2005 ರಲ್ಲಿ ಲಾಹೋರ್ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಶಾಹಿದ್ ಅಫ್ರಿದಿ ಕೇವಲ 78 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ದರು.
4- ಕಮ್ರಾನ್ ಅಕ್ಮಲ್: 2005 ರಲ್ಲಿ ನಡೆದ ಲಾಹೋರ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ 81 ಎಸೆತಗಳಲ್ಲಿ ಶತಕ ಬಾರಿಸಿದ್ದರು.
5- ಆ್ಯಡಂ ಗಿಲ್ಕ್ರಿಸ್ಟ್: 2000 ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ದಾಂಡಿಗ ಆ್ಯಡಂ ಗಿಲ್ಕ್ರಿಸ್ಟ್ ಕೇವಲ 84 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲಂ ಹೆಸರಿನಲ್ಲಿದೆ. 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೆಕಲಂ ಕೇವಲ 54 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.