Updated on: Jan 22, 2023 | 8:28 AM
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ವನಿತಾ ಪಡೆ ತನ್ನ ಮೊದಲ ಸೋಲನ್ನು ಎದುರಿಸಿದೆ. ಶೆಫಾಲಿ ವರ್ಮಾ ನಾಯಕತ್ವದ ಭಾರತ ತಂಡವು ಗುಂಪು ಹಂತದಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-ಸಿಕ್ಸ್‌ಗೆ ಪ್ರವೇಶಿಸಿತ್ತು. ಆದರೆ ಇಲ್ಲಿ ತನ್ನು ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದೆ.
ಜನವರಿ 21 ರ ಶನಿವಾರದಂದು ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ತಂಡ ಆಸೀಸ್ ದಾಳಿಗೆ ಸಿಲುಕಿ ನಲುಗಿತು. ಸೀನಿಯರ್ ಕ್ರಿಕೆಟ್ನಲ್ಲಿ ಅನುಭವ ಹೊಂದಿರುವ ನಾಯಕಿ ಶಫಾಲಿ (8) ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ (7) ಸಂಪೂರ್ಣ ವಿಫಲವಾದ ಕಾರಣ ಇಡೀ ತಂಡ 18.5 ಓವರ್‌ಗಳಲ್ಲಿ 87 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತ ಭರ್ಜರಿ ಸ್ಕೋರ್ ಮಾಡಿದ್ದು, ಅದರಲ್ಲಿ ಶ್ವೇತಾ ಸೆಹ್ರಾವತ್ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯದಲ್ಲಿಯೂ ಶ್ವೇತಾ 21 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಭಾರತ ನೀಡಿದ ಈ ಅಲ್ಪ ಗುರಿಯನ್ನು ಆಸ್ಟ್ರೇಲಿಯಾ ಕೇವಲ 13.5 ಓವರ್‌ಗಳಲ್ಲಿ, 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಈ ಸೋಲು ಭಾರತದ ನಿವ್ವಳ ರನ್ ರೇಟ್ಗೆ (+1.905) ಹೊಡೆತ ನೀಡಿದ್ದು, ಇದು ಯಾವ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸೂಪರ್ ಸಿಕ್ಸ್ ಗ್ರೂಪ್ I ನಲ್ಲಿ ಭಾರತ ತಂಡ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.
Published On - 8:26 am, Sun, 22 January 23