ಹೈದರಾಬಾದ್ನಲ್ಲಿ ನಡೆದಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ರೋಚಕ ಕಾದಾಟದಲ್ಲಿ ಟೀಮ್ ಇಂಡಿಯಾ 12 ರನ್ಗಳ ಜಯ ಸಾಧಿಸಿತು. ಹೀಗಾಗಿ ದ್ವಿತೀಯ ಏಕದಿನ ಕೂಡ ಹೈಸ್ಕೋರ್ ಪಂದ್ಯ ಆಗಬಹುದು ಎಂದೇ ನಂಬಲಾಗಿತ್ತು. ಆದರೆ, ರಾಯ್ಪುರದಲ್ಲಿ ನಡೆದಿದ್ದೇ ಬೇರೆ.
ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಬಿರುಗಾಳಿ ಎಬ್ಬಿಸಿದರು. ಕಿವೀಸ್ ಬ್ಯಾಟರ್ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಲಿಯನ್ಗೆ ಅಟ್ಟಿದ ಟೀಮ್ ಇಂಡಿಯಾ ಬೌಲರ್ಸ್ ಸರಣಿ ವಶಪಡಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಹಿಸಿದರು.
34.2 ಓವರ್ಗಳಲ್ಲಿ ಕೇವಲ 108 ರನ್ಗಳನ್ನು ನೀಡಿ ಸರ್ವಪತನ ಕಂಡ ಕಿವೀಸ್ ತಂಡ ಹೀನಾಯ ಪ್ರದರ್ಶನ ತೋರಿತು. ಮೊಹಮ್ಮದ್ ಶಮಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡು, ತಮ್ಮ 6 ಓವರ್ಗಳಲ್ಲಿ ಕೇವಲ 18 ರನ್ ನೀಡಿ ಮೂರು ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭಾರತದ ವೇಗಿಗಳ ದಾಳಿಗೆ ನ್ಯೂಜಿಲೆಂಡ್ ಆಟಗಾರರು ರನ್ ಗಳಿಸಲು ಹರಸಾಹಸಪಡಬೇಕಾಯಿತು. ಸ್ಟಾರ್ ಬ್ಯಾಟರ್ ಎನಿಸಿಕೊಂಡವರಾರು ಎರಡಂಕಿ ಮೀರಲಿಲ್ಲ. ಗ್ಲೆನ್ ಫಿಲಿಪ್ಸ್ 36 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು.
ಭಾರತ ತಂಡ ಕೇವಲ 20.1 ಓವರ್ಗಳಿಗೆ 2 ವಿಕೆಟ್ ಕಳೆದುಕೊಂಡು 111 ರನ್ಗಳಿಸುವ ಮೂಲಕ 8 ವಿಕೆಟ್ಗಳ ಜಯ ದಾಖಲಿಸಿತು. ರೋಹಿತ್ ಶರ್ಮಾ 50 ಎಸೆತದಲ್ಲಿ 7 ಬೌಂಡರಿ ಮತ್ತು 2 ಸಿಕ್ಸ್ ಒಳಗೊಂಡಂತೆ 51 ರನ್ ಗಳಿಸಿ ಗೆಲವಿನ ಹಾದಿಯನ್ನು ಸುಗಮಗೊಳಿಸಿದರು.
ವಿರಾಟ್ ಕೊಹ್ಲಿ 11 ರನ್ಗೆ ಔಟಾದರೆ ಯುವ ಆಟಗಾರ ಶುಭ್ಮನ್ ಗಿಲ್ ಔಟ್ ಆಗದೇ 40 (53) ಮತ್ತು ಇಶಾನ್ ಕಿಶನ್ 8 (9) ರನ್ ಗಳಿಸುವ ಮೂಲಕ ತಂಡದ ಗೆಲುವನ್ನು ಸಲೀಸಾಗಿ ಡದಕ್ಕೆ ಸೇರಿಸಿದರು. ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಬಾಚಿಕೊಂಡರು.
8 ವಿಕೆಟ್ಗಳ ಅಮೋಘ ಜಯದೊಂದಿಗೆ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಿಂದ ಇನ್ನು 1 ಪಂದ್ಯ ಬಾಕಿ ಇರುವಂತೆಯೇ ಜಯದ ಮಾಲೆಯನ್ನು ಧರಿಸಿದೆ. ಅಂತಿಮ ಏಕದಿನ ಜನವರಿ 24 ಮಂಗಳವಾರದಂದು ನಡೆಯಲಿದೆ.
Published On - 7:46 am, Sun, 22 January 23