U19 World Cup: 5 ಬಾರಿ ಚಾಂಪಿಯನ್ಸ್, 3 ಬಾರಿ ರನ್ನರ್ ಅಪ್: ಕಿರಿಯರ ವಿಶ್ವಕಪ್ನಲ್ಲಿ ಭಾರತದ್ದೇ ಪಾರುಪತ್ಯ
TV9 Web | Updated By: ಝಾಹಿರ್ ಯೂಸುಫ್
Updated on:
Feb 07, 2024 | 7:09 AM
Under-19 World Cup 2024: 15ನೇ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡವು ಫೈನಲ್ಗೆ ಪ್ರವೇಶಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡವು ಸತತವಾಗಿ 5ನೇ ಬಾರಿ ಫೈನಲ್ಗೆ ಲಗ್ಗೆಯಿಟ್ಟಿದೆ. ಹಾಗೆಯೇ ಇದು ಟೀಮ್ ಇಂಡಿಯಾದ 9ನೇ ಅಂಡರ್-19 ಫೈನಲ್ ಪಂದ್ಯ ಎಂಬುದು ವಿಶೇಷ.
1 / 8
ಅಂಡರ್-19 ವಿಶ್ವಕಪ್ 2024 ರ ಮೊದಲ ಸೆಮಿಫೈನಲ್ನಲ್ಲಿ ಗೆದ್ದು ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದೆ. ವಿಲ್ಲೊಮೂರ್ ಪಾರ್ಕ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ 9ನೇ ಬಾರಿ ಟೀಮ್ ಇಂಡಿಯಾ ಕಿರಿಯರ ವಿಶ್ವಕಪ್ನಲ್ಲಿ ಫೈನಲ್ಗೆ ಪ್ರವೇಶಿಸಿದೆ.
2 / 8
ವಿಶೇಷ ಎಂದರೆ ಕಳೆದ 14 ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡವು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು 3 ಬಾರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಅಂದರೆ ಕಿರಿಯರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದೀಗ ಉದಯ್ ಸಹರಾನ್ ನಾಯಕತ್ವದಲ್ಲಿ ಭಾರತ ತಂಡವು 9ನೇ ಬಾರಿ ಫೈನಲ್ ಆಡಲಿದ್ದು, ಈ ಬಾರಿ ಕೂಡ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಹಾಗಿದ್ರೆ ಭಾರತ ತಂಡ ಯಾವಾಗ ಅಂಡರ್ 19 ವಿಶ್ವಕಪ್ ಗೆದ್ದಿತ್ತು ಎಂಬುದನ್ನು ನೋಡೋಣ...
3 / 8
2000: ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 2000 ರಲ್ಲಿ ಮೊದಲ ಬಾರಿ ಅಂಡರ್ 19 ವಿಶ್ವಕಪ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 178 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಕೊಂಡಿತು.
4 / 8
2008: 2000 ರಲ್ಲಿ ಭಾರತ ತಂಡ ಮೊದಲ ಅಂಡರ್-19 ವಿಶ್ವಕಪ್ ಗೆದ್ದರೂ ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಬರೋಬ್ಬರಿ 8 ವರ್ಷ ಕಾಯಬೇಕಾಯಿತು. 2008 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ತಂಡವನ್ನು 12 ರನ್ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 159 ರನ್ ಗಳಿಸಿತ್ತು. ಡಕ್ವರ್ಥ್ ಲೂಯಿಸ್ ಪ್ರಕಾರ 25 ಓವರ್ಗಳಲ್ಲಿ 116 ರನ್ಗಳ ಗುರಿ ಪಡೆದ ಸೌತ್ ಆಫ್ರಿಕಾ ತಂಡವು ಕೇವಲ 103 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಟೀಮ್ ಇಂಡಿಯಾ 2ನೇ ಬಾರಿ ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿತು.
5 / 8
2012: ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ತಂಡವು 2012 ರಲ್ಲಿ ಭಾರತಕ್ಕೆ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್‌ನಲ್ಲಿ 225 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 6 ವಿಕೆಟ್ಗಳ ಜಯ ಸಾಧಿಸಿತ್ತು.
6 / 8
2018: ಭಾರತ ತಂಡವು ನಾಲ್ಕನೇ ಬಾರಿಗೆ ಅಂಡರ್ 19 ವಿಶ್ವಕಪ್ ಗೆದ್ದಿದ್ದು ಪೃಥ್ವಿ ಶಾ ನಾಯಕತ್ವದಲ್ಲಿ. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 216 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 2 ವಿಕೆಟ್ ಕಳೆದುಕೊಂಡು 220 ರನ್ ಬಾರಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.
7 / 8
2022: ಕಳೆದ ಬಾರಿಯ ವಿಶ್ವಕಪ್ನಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 190 ರನ್ಗಳ ಗುರಿಯನ್ನು ಟೀಮ್ ಇಂಡಿಯಾ 47.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 4 ವಿಕೆಟ್ಗಳ ಜಯ ಸಾಧಿಸಿತ್ತು. ಈ ಮೂಲಕ ಭಾರತ ತಂಡವು 5ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.
8 / 8
ಇನ್ನು 2006, 2016, 2020 ರಲ್ಲಿ ಭಾರತ ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಇದೀಗ ಟೀಮ್ ಇಂಡಿಯಾ 6ನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಹೊಸ್ತಿಲಲ್ಲಿದೆ. ಸೌತ್ ಆಫ್ರಿಕಾ ವಿರುದ್ಧ ಸೆಮಿಫೈನಲ್ನಲ್ಲಿ ಗೆದ್ದಿರುವ ಭಾರತ ತಂಡವು ಫೈನಲ್ನಲ್ಲಿ ಪಾಕಿಸ್ತಾನ್ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.