Asia Cup: 2 ಟಿ20, 2 ಏಕದಿನ ಟೂರ್ನಿ: 4 ದೇಶಗಳಲ್ಲಿ ಏಷ್ಯಾಕಪ್
Asia Cup 2025: ಟಿ20 ವಿಶ್ವಕಪ್ಗೂ ಮುನ್ನ ಭಾರತದಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆ. 2026 ರಲ್ಲಿ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಲಿದೆ. ಅದಕ್ಕೂ ಮುನ್ನ ಭಾರತದಲ್ಲಿ ಟಿ20 ಏಷ್ಯಾಕಪ್ ಕೂಡ ಜರುಗಲಿದೆ.
Updated on: Oct 06, 2024 | 11:04 AM

ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ ಆತಿಥ್ಯ ರಾಷ್ಟ್ರಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. ಅದರಂತೆ 2025ರ ಏಷ್ಯಾಕಪ್ ಟೂರ್ನಿಯು ಭಾರತದಲ್ಲೇ ನಡೆಯಲಿದೆ. 2026ರ ಟಿ20 ವಿಶ್ವಕಪ್ ಪೂರ್ವಭಾವಿಯಾಗಿ ಮುಂದಿನ ವರ್ಷ ಟಿ20 ಮಾದರಿಯಲ್ಲೇ ಏಷ್ಯಾಕಪ್ ಆಯೋಜಿಸಲು ನಿರ್ಧರಿಸಲಾಗಿದೆ.

ಇನ್ನು 2027ರಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಏಕದಿನ ವಿಶ್ವಕಪ್ಗೆ ಪೂರ್ವಭಾವಿಯಾಗಿ 2027 ರ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತದೆ. ಈ ಟೂರ್ನಿಗೆ ಬಾಂಗ್ಲಾದೇಶ್ ಆತಿಥ್ಯವಹಿಸಲಿದೆ.

ಹಾಗೆಯೇ 2029ರ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲೇ ಜರುಗಲಿದೆ. 2030 ರಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಕ್ಕೂ ಮುಂಚಿತವಾಗಿ ಏಷ್ಯಾಕಪ್ ಅನ್ನು ಆಯೋಜಿಸಲಾಗುತ್ತದೆ. ಅಲ್ಲದೆ 2029ರ ಏಷ್ಯಾಕಪ್ಗೆ ಪಾಕಿಸ್ತಾನ್ ಆತಿಥ್ಯವಹಿಸಲಿದೆ.

ಇನ್ನು 2031 ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿ 2031 ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಅದಕ್ಕೂ ಮುನ್ನ ಶ್ರೀಲಂಕಾದಲ್ಲಿ ಒನ್ಡೇ ಮಾದರಿಯಲ್ಲಿ ಏಷ್ಯಾಕಪ್ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.

ಅದರಂತೆ ಮುಂದಿನ 7 ವರ್ಷಗಳಲ್ಲಿ 4 ಏಷ್ಯಾಕಪ್ ಟೂರ್ನಿ ನಡೆಯಲಿದೆ. ಇದರ ನಡುವೆ ಮೂರು ಟಿ20 ವಿಶ್ವಕಪ್, 2 ಏಕದಿನ ವಿಶ್ವಕಪ್ ಹಾಗೂ ಒಂದು ಚಾಂಪಿಯನ್ಸ್ ಟ್ರೋಫಿ ಕೂಡ ಜರುಗಲಿದೆ. ಹೀಗಾಗಿ ಮುಂದಿನ ಏಳು ವರ್ಷಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ ಎನ್ನಬಹುದು.



















