
ಟಿ20 ಫಾರ್ಮ್ಯಾಟ್ ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi) ಮುಂದೆ ಭರ್ಜರಿ ದಾಖಲೆಯೊಂದಿದೆ. ಅದು ಸಹ ವಿರಾಟ್ ಕೊಹ್ಲಿಯ ಗ್ರೇಟೆಸ್ಟ್ ರೆಕಾರ್ಡ್. ಈ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ 14 ವರ್ಷದ ಯುವ ಎಡಗೈ ದಾಂಡಿಗ.

ಟಿ೨೦ ಕ್ರಿಕೆಟ್‌ನಲ್ಲಿ ಒಂದೇ ವರ್ಷ ಅತ್ಯಧಿಕ ಸೆಂಚುರಿ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಐಪಿಎಲ್ 2016 ರಲ್ಲಿ ಬರೋಬ್ಬರಿ 4 ಸೆಂಚುರಿ ಸಿಡಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಮುರಿಯಲು ವೈಭವ್ ಸೂರ್ಯವಂಶಿಗೆ ಉತ್ತಮ ಅವಕಾಶವಿದೆ.

ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು. ಇದಾದ ಬಳಿಕ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ೨೦ ಟೂರ್ನಿಯಲ್ಲಿ ಯುಎಇ ವಿರುದ್ಧ ಶರವೇಗದ ಶತಕ ಬಾರಿಸಿದ್ದರು.

ಇದೀಗ ಸೈಯ್ಯದ್ ಮುಷ್ತಾಕ್ ಅಲಿ ಟಿ೨೦ ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ 2025 ರಲ್ಲಿ ಒಟ್ಟು ಮೂರು ಶತಕ ಗಳಿಸಿದ್ದಾರೆ. ಇನ್ನೊಂದು ಸೆಂಚುರಿ ಬಾರಿಸಿದರೆ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಬಹುದು.

ಇನ್ನು ವಿರಾಟ್ ಕೊಹ್ಲಿಯ ಭರ್ಜರಿ ದಾಖಲೆ ಮುರಿಯಲು ವೈಭವ್ ಎರಡು ಶತಕಗಳನ್ನು ಬಾರಿಸಲೇಬೇಕು. ಆದರೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬಿಹಾರ ಪರ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ ಮುಂದೆ ಇನ್ನು ಕೇವಲ ಮೂರು ಮ್ಯಾಚ್ಗಳು ಮಾತ್ರ ಇದೆ. ಈ ಮೂರು ಪಂದ್ಯಗಳಲ್ಲಿ 2 ಶತಕ ಬಾರಿಸಿದರೆ ಟಿ೨೦ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷ ಅತ್ಯಧಿಕ ಸೆಂಚುರಿ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಲಿದೆ.