6,6,6,6,6,6,6,6: ಟೆಸ್ಟ್ನಲ್ಲೂ ಶರವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ
Vaibhav Suryavanshi Century: ಬ್ರಿಸ್ಬೇನ್ನಲ್ಲಿ ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ಯೂತ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ.
Updated on:Oct 01, 2025 | 11:56 AM

ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಈ ಬಾರಿ ಸಿಡಿಲಬ್ಬರ ಕಂಡು ಬಂದಿರುವುದು ಆಸ್ಟ್ರೇಲಿಯಾ ಪಿಚ್ನಲ್ಲಿ. ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಅಂಡರ್ 19 ವಿರುದ್ಧದ ಯೂತ್ ಟೆಸ್ಟ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ.

ಬ್ರಿಸ್ಬೇನ್ನ ಹಿಯಾನ್ ಹೀಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 243 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತ ಅಂಡರ್ 19 ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಯುವ ದಾಂಡಿಗ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ವೈಭವ್ ಸೂರ್ಯವಂಶಿ ಕೇವಲ 78 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಬಳಿಕ ಕೂಡ ವೈಭವ್ ಆಸೀಸ್ ಬೌಲರ್ಗಳ ಬೆಂಡೆತ್ತಿದರು.

ಅಂತಿಮವಾಗಿ 86 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 113 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವೈಭವ್ ಅವರ ಈ ವೈಭೋವಪೇತ ಇನಿಂಗ್ಸ್ನಿಂದಾಗಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ 300+ ರನ್ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.

ಇದಕ್ಕೂ ಮುನ್ನ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 11 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು. ಇದೀಗ ಯೂತ್ ಟೆಸ್ಟ್ನಲ್ಲೂ ತನ್ನ ವಿಸ್ಫೋಟಕ ಬ್ಯಾಟಿಂಗ್ನೊಂದಿಗೆ ಸಂಚಲನ ಸೃಷ್ಟಿಸಿದ್ದಾರೆ.
Published On - 11:55 am, Wed, 1 October 25
