
ರಾಂಚಿಯಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (Vaibhav Suryavanshi) ಭರ್ಜರಿ ಶತಕ ಬಾರಿಸಿದ್ದಾರೆ. ಈ ಸೆಂಚುರಿಯೊಂದಿಗೆ 14 ವರ್ಷದ ಯುವ ದಾಂಡಿಗ ಏಕದಿನ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅರುಣಾಚಲ ಪ್ರದೇಶ್ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಿಹಾರ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಅರುಣಾಚಲ ಪ್ರದೇಶ್ ಬೌಲರ್ಗಳ ಬೆಂಡೆತ್ತಿದ ವೈಭವ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ವೈಭವ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಯುವ ದಾಂಡಿಗನ ಬ್ಯಾಟ್ನಿಂದ ಕೇವಲ 54 ಎಸೆತಗಳಲ್ಲಿ 150 ರನ್ಗಳು ಮೂಡಿಬಂತು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಅತೀ ವೇಗವಾಗಿ 150 ರನ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.

ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ (ಲಿಸ್ಟ್ ಎ) ಅತೀ ವೇಗವಾಗಿ 150 ರನ್ಗಳನ್ನು ಸಿಡಿಸಿದ ವಿಶ್ವ ದಾಖಲೆ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. ಎಬಿಡಿ 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 64 ಎಸೆತಗಳಲ್ಲಿ 150 ರನ್ ಪೂರೈಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ವೈಭವ್ ಸೂರ್ಯವಂಶಿ ಕೇವಲ 54 ಎಸೆತಗಳಲ್ಲಿ 150 ರನ್ ಸಿಡಿಸಿದ್ದಾರೆ. ಅಂತಿಮವಾಗಿ 84 ಎಸೆತಗಳನ್ನು ಎದುರಿಸಿದ ವೈಭವ್ 15 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 190 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 10 ರನ್ಗಳಿಂದ ದ್ವಿಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿಕೊಂಡರು. ವೈಭವ್ ಸೂರ್ಯವಂಶಿಯ ಈ ಆರ್ಭಟದ ನೆರವಿನೊಂದಿಗೆ ಬಿಹಾರ ತಂಡವು 28 ಓವರ್ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 267 ರನ್ ಕಲೆಹಾಕಿದೆ.