- TV9 Kannada Kannada News Photos Cricket Photos Virat Kohli's 16,000 List A Runs: Sachin Tendulkar Milestone in Vijay Hazare Trophy Return
Virat Kohli: ಖಾತೆ ತೆರೆದು ಕ್ರಿಕೆಟ್ ದೇವರ ದಾಖಲೆಯನ್ನು ಪುನರಾವರ್ತಿಸಿದ ಕಿಂಗ್ ಕೊಹ್ಲಿ
Virat Kohli's 16,000 List A Runs: ವಿಜಯ್ ಹಜಾರೆ ಟ್ರೋಫಿ ಆರಂಭಗೊಂಡಿದ್ದು, ವಿರಾಟ್ ಕೊಹ್ಲಿ 15 ವರ್ಷಗಳ ನಂತರ ಆಡುತ್ತಿದ್ದಾರೆ. ಒಂದು ರನ್ ಗಳಿಸುವ ಮೂಲಕ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿ 16,000 ರನ್ ಪೂರೈಸಿದ್ದಾರೆ. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯರಾಗಿದ್ದಾರೆ. ಇದು ಮುಂಬರುವ ಏಕದಿನ ಸರಣಿಗೆ ಅವರ ಸಿದ್ಧತೆಗೆ ನಿರ್ಣಾಯಕವಾಗಿದೆ.
Updated on:Dec 24, 2025 | 3:47 PM

ಮತ್ತೊಂದು ಪ್ರಸಿದ್ಧ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಇಂದಿನಿಂದ ಆರಂಭವಾಗಿದೆ. ದೇಶದ ನಾನಾ ಸ್ಥಳಗಳಲ್ಲಿ ಹಲವು ತಂಡಗಳು ಕಣಕ್ಕಿಳಿದಿವೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ವಿಶೇಷತೆಯೆಂದರೆ, ಟೀಂ ಇಂಡಿಯಾದ ಇಬ್ಬರು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಬರೋಬ್ಬರಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಪುನಾರವರ್ತಿಸಿದರು. ವಾಸ್ತವವಾಗಿ ಕೊಹ್ಲಿ ಒಂದು ರನ್ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ 16,000 ರನ್ಗಳನ್ನು ಪೂರ್ಣಗೊಳಿಸಿದರು.

ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಡುವ ಮೊದಲು, ವಿರಾಟ್ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ನಲ್ಲಿ 15,999 ರನ್ ಗಳಿಸಿದ್ದರು. 342 ಪಂದ್ಯಗಳ 329 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ, 57 ಶತಕಗಳು ಮತ್ತು 54 ಅರ್ಧಶತಕಗಳೊಂದಿಗೆ ಇಷ್ಟು ರನ್ ಕಲೆಹಾಕಿದ್ದರು. ಇದೀಗ ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ 330 ನೇ ಲಿಸ್ಟ್ ಎ ಇನ್ನಿಂಗ್ಸ್ ಆಡಿದ ಕೊಹ್ಲಿ 16,000 ರನ್ ಪೂರೈಸಿದರು.

ಲಿಸ್ಟ್ ಎ ಕ್ರಿಕೆಟ್ನಲ್ಲಿ 16,000 ರನ್ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ತಮ್ಮ 343 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿರುವ ವಿರಾಟ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಹೊಂದಿದ್ದ ಮೈಲಿಗಲ್ಲನ್ನು ಮೀರಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನಲ್ಲಿ 16,000 ರನ್ ಕಲೆಹಾಕಿದ ಮೊದಲ ಭಾರತೀಯ ಸಚಿನ್ ತೆಂಡೂಲ್ಕರ್.

ವಿರಾಟ್ ಕೊಹ್ಲಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಕೊನೆಯ ಬಾರಿಗೆ ಈ ಪಂದ್ಯಾವಳಿಯಲ್ಲಿ 2010-11ರಲ್ಲಿ ಆಡಿದ್ದ ಕೊಹ್ಲಿ ಇದೀಗ ಆಡಿದ ಮೊದಲ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಪುನಾರವರ್ತಿಸಿದ್ದಾರೆ. ಕೊಹ್ಲಿಗೆ, ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯು 2027 ರ ಜನವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಾಗಿ ನಿರ್ಣಾಯಕವಾಗಿದೆ.
Published On - 3:46 pm, Wed, 24 December 25

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.
Read More



