
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಈ ದಾಖಲೆಯೊಂದಿಗೆ ಯುವ ಎಡಗೈ ದಾಂಡಿಗ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಝಿಂಬಾಬ್ವೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ನ 7ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ವೈಭವ್ ಸೂರ್ಯವಂಶಿ 67 ಎಸೆತಗಳಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 72 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ವೈಭವ್ ಯೂತ್ ಒಡಿಐ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ.

ಈ ಸಾವಿರ ರನ್ಗಳೊಂದಿಗೆ ಯೂತ್ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಗೆ ಸಾಧ್ಯವಾಗದಿರುವುದನ್ನು ವೈಭವ್ ಸೂರ್ಯವಂಶಿ ಸಾಧಿಸಿ ತೋರಿಸಿದ್ದಾರೆ. ಅಂದರೆ ಅಂಡರ್-19 ಏಕದಿನ ಕ್ರಿಕೆಟ್ನಲ್ಲಿ 28 ಪಂದ್ಯಗಳನ್ನಾಡಿದ್ದ ವಿರಾಟ್ ಕೊಹ್ಲಿ ಕಲೆಹಾಕಿದ್ದು 978 ರನ್ಗಳು ಮಾತ್ರ.

ಇದೀಗ ಕೇವಲ 20 ಪಂದ್ಯಗಳ ಮೂಲಕ ವೈಭವ್ ಸೂರ್ಯವಂಶಿ 1026 ರನ್ಗಳಿಸಿದ್ದಾರೆ. ಈ ಮೂಲಕ ಯೂತ್ ಒಡಿಐ ಕ್ರಿಕೆಟ್ನಲ್ಲಿ 1000 ಕ್ಕೂ ಅಧಿಕ ರನ್ಗಳಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ 7ನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿಜಯ್ ಝೋಲ್. ಅಂಡರ್ -19 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 1404 ರನ್ ಗಳಿಸುವ ಮೂಲಕ ಝೊಲ್ ಟೀಮ್ ಇಂಡಿಯಾ ಪರ ಯೂತ್ ಓಡಿಐ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ದಾಖಲೆ ಮುರಿಯಲು ವೈಭವ್ ಸೂರ್ಯವಂಶಿಗೆ ಕೇವಲ 378 ರನ್ಗಳು ಬೇಕಿದೆ. ಹೀಗಾಗಿ ವೈಭವ್ ಕಡೆಯಿಂದ ಮತ್ತೊಂದು ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.