ಭಾರತ ತಂಡದ ಪರ ಟಿ20 ಕ್ರಿಕೆಟ್ನಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ್ದು ಕೇವಲ ಮೂವರು ಬೌಲರ್ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ಬೌಲರ್ ಭುವನೇಶ್ವರ್ ಕುಮಾರ್. ಆ ಬಳಿಕ ಕುಲ್ದೀಪ್ ಯಾದವ್ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಇವರಿಬ್ಬರ ದಾಖಲೆಯನ್ನು ಸರಿಗಟ್ಟಿ ವರುಣ್ ಚಕ್ರವರ್ತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಆದರೆ ಈ ಸಾಧನೆಯ ಹೊರತಾಗಿಯೂ ವರುಣ್ ಚಕ್ರವರ್ತಿ ಹೆಸರಿಗೆ ಅನಗತ್ಯ ದಾಖಲೆಯೊಂದು ಸೇರ್ಪಡೆಯಾಗಿದೆ. ಅದು ಕೂಡ ಎರಡು ಬಾರಿ 5 ವಿಕೆಟ್ಗಳನ್ನು ಕಬಳಿಸಿ ಎಂಬುದೇ ಅಚ್ಚರಿ. ಅಂದರೆ ವರುಣ್ ಚಕ್ರವರ್ತಿ 2 ಬಾರಿ ಐದು ವಿಕೆಟ್ ಪಡೆದರೂ ಆ ಪಂದ್ಯಗಳನ್ನು ಭಾರತ ತಂಡ ಗೆದ್ದಿಲ್ಲ.
2024 ರಲ್ಲಿ ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾದ ವಿರುದ್ಧದ ಟಿ20 ತಂಡದಲ್ಲಿ ಪಂದ್ಯದಲ್ಲಿ ವರುಣ್ 17 ರನ್ಗೆ 5 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದೀಗ ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ವರುಣ್ 24 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಈ ಮ್ಯಾಚ್ನಲ್ಲೂ ಭಾರತ ತಂಡ 26 ರನ್ಗಳಿಂದ ಸೋಲನುಭವಿಸಿದೆ.
ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸೋತ ಪಂದ್ಯಗಳಲ್ಲಿ 2 ಬಾರಿ 5 ವಿಕೆಟ್ ಕಬಳಿಸಿದ ಅನಗತ್ಯ ದಾಖಲೆಯೊಂದು ವರುಣ್ ಚಕ್ರವರ್ತಿ ಪಾಲಾಗಿದೆ. ಇಲ್ಲಿ ವರುಣ್ ಅವರ ತಪ್ಪು ಏನೂ ಇಲ್ಲದಿದ್ದರೂ, ಟೀಮ್ ಇಂಡಿಯಾ ಸ್ಪಿನ್ನರ್ನ ಹೆಸರು ಅನಗತ್ಯ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದು ಮಾತ್ರ ವಿಪರ್ಯಾಸ.
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಸರಣಿಯು 2-1 ಹಂತಕ್ಕೆ ಬಂದು ನಿಂತಿದೆ. ಈ ಸರಣಿಯ 4ನೇ ಮ್ಯಾಚ್ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ, ಇಂಗ್ಲೆಂಡ್ ತಂಡವು ನಾಲ್ಕನೇ ಪಂದ್ಯದಲ್ಲಿ ಗೆಲ್ಲಲೇಬೇಕು. ಹೀಗಾಗಿ 4ನೇ ಮ್ಯಾಚ್ನಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.