
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಇದೀಗ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅದರಲ್ಲೂ ವೇದಾ ಕೃಷ್ಣಮೂರ್ತಿ ತನ್ನ ತಾಯಿಯ ಹುಟ್ಟುಹಬ್ಬದಂದೇ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದು ವಿಶೇಷ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅರ್ಜುನ್ ಹೊಯ್ಸಳ ಅವರೊಂದಿಗಿನ ಮುದವೆ ಫೋಟೋವನ್ನು ಹಂಚಿಕೊಂಡಿರುವ ವೇದಾ ಕೃಷ್ಣಮೂರ್ತಿ, ಇದಕ್ಕೆ ಶ್ರೀ ಮತ್ತು ಶ್ರೀಮತಿ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವೇದಾ ಅವರು ತಮ್ಮ ಗೆಳೆಯ ಅರ್ಜುನ್ ಹೊಯ್ಸಳ ಅವರೊಂದಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳಲ್ಲಿ ಅರ್ಜುನ್ ಮೊಣಕಾಲಿನ ಮೇಲೆ ಕುಳಿತು ತುಂಬಾ ರೋಮ್ಯಾಂಟಿಕ್ ಆಗಿ ವೇದಾಗೆ ಪ್ರಪೋಸ್ ಮಾಡುತ್ತಿರುವುದು ಕಂಡುಬಂದಿತ್ತು.

2016 ರಲ್ಲಿ ಕರ್ನಾಟಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅರ್ಜುನ್ ಹೊಯ್ಸಳ ದೇಶೀ ಕ್ರಿಕೆಟ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನು 2011 ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ವೇದಾ ಕೃಷ್ಣಮೂರ್ತಿ ಅವರು ಟೀಂ ಇಂಡಿಯಾ ಪರ 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನು ಆಡಿದ್ದಾರೆ.