
ದೇಶೀಯ ಟೂರ್ನಿಯಲ್ಲಿ ಯುವ ಆಟಗಾರ ವೆಂಕಟೇಶ್ ಅಯ್ಯರ್ ಅಬ್ಬರ ಮುಂದುವರೆದಿದೆ. ಈ ಬಾರಿಯ ವಿಜಯ್ ಹಜಾರೆ ಟೂರ್ನಿಯ 2ನೇ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸುವ ಮೂಲಕ ಅಯ್ಯರ್ ಸೆಂಚುರಿ ಖಾತೆ ತೆರೆದಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಕೇರಳ ವಿರುದ್ದದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಅದರಲ್ಲೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಕೇರಳ ಬೌಲರುಗಳ ಬೆಂಡೆತ್ತಿದರು. 84 ಎಸೆತಗಳನ್ನು ಎದುರಿಸಿದ ಅಯ್ಯರ್ ಏಳು ಭರ್ಜರಿ ಬೌಂಡರಿ ಹಾಗೂ ನಾಲ್ಕು ಸೂಪರ್ ಸಿಕ್ಸರ್‌ಗಳನ್ನು ಬಾರಿಸಿ ಅಬ್ಬರಿಸಿದರು. ಈ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕ ಪೂರೈಸಿದ ಅಯ್ಯರ್, ಕೊನೆಗೆ 114 ರನ್ಗಳಿಸಿ ಬಾಸಿಲ್ ಥಂಪಿಗೆ ವಿಕೆಟ್ ಒಪ್ಪಿಸಿದರು.

ವೆಂಕಟೇಶ್ ಅಯ್ಯರ್ ಅವರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮಧ್ಯಪ್ರದೇಶ ತಂಡವು 9 ವಿಕೆಟ್ ಕಳೆದುಕೊಂಡು 329 ರನ್ಗಳ ಬೃಹತ್ ಮೊತ್ತ ಪೇರಿಸಿತು. ಅಂದಹಾಗೆ ಇದು ಅಯ್ಯರ್ ಅವರ ಮೂರನೇ ಲೀಸ್ಟ್ ಎ ಶತಕ ಎಂಬುದು ವಿಶೇಷ.

ಇದಕ್ಕೂ ಮುನ್ನ ಇದೇ ವರ್ಷ ಅಯ್ಯರ್ 198 ರನ್ ಬಾರಿಸಿದ್ದರು ಎಂಬುದು ಮತ್ತೊಂದು ವಿಶೇಷ. ಕೊರೋನಾ ಕಾರಣದಿಂದ ಈ ವರ್ಷಾರಂಭದಲ್ಲಿ ನಡೆದ 2020-21 ರ ವಿಜಯ್ ಹಜಾರೆ ಟೂರ್ನಿಯಲ್ಲಿ ಅಯ್ಯರ್ ಬಿರುಸಿನ ಶತಕ ಗಳಿಸಿದ್ದರು.

ಪಂಜಾಬ್ ವಿರುದ್ಧದ ಈ ಪಂದ್ಯದಲ್ಲಿ 146 ಎಸೆತಗಳಲ್ಲಿ 20 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 198 ರನ್ ಬಾರಿಸಿದ್ದರು. ಇದೀಗ ಟೀಮ್ ಇಂಡಿಯಾದ ಭವಿಷ್ಯದ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ವೆಂಕಟೇಶ್ ಅಯ್ಯರ್ ಅಬ್ಬರ ದೇಶೀಯ ಟೂರ್ನಿಯಲ್ಲಿ ಮುಂದುವರೆದಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಖಚಿತ ಎಂದೇ ಹೇಳಬಹುದು.