
IPL 2023: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಕೆಕೆಆರ್ ಬ್ಯಾಟರ್ ವೆಂಕಟೇಶ್ ಅಯ್ಯರ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ವೆಂಕಿ ಕೇವಲ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಶತಕ ಪೂರೈಸಿದ್ದರು. ಈ ಮೂಲಕ ಕೆಕೆಆರ್ ಪರ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಲ್ಲದೆ ಐಪಿಎಲ್ನಲ್ಲಿ 50 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಮೊದಲ ಕೆಕೆಆರ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ 19ನೇ ಬ್ಯಾಟರ್ ಎನಿಸಿಕೊಂಡರು.

ಇನ್ನು ಕೆಕೆಆರ್ ಪರ ಶತಕ ಬಾರಿಸಿದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ವೆಂಕಟೇಶ್ ಅಯ್ಯರ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2008 ರಲ್ಲಿ ಬ್ರೆಂಡನ್ ಮೆಕಲಂ ಶತಕ ಬಾರಿಸಿದ್ದರು. ಇದೀಗ 15 ವರ್ಷಗಳ ಬಳಿಕ ಕೆಕೆಆರ್ ಬ್ಯಾಟರ್ರೊಬ್ಬರು ಶತಕ ಸಿಡಿಸಿರುವುದು ವಿಶೇಷ.

ಐಪಿಎಲ್ 2023 ರಲ್ಲಿ ವೇಗದ ಶತಕ ಬಾರಿಸಿದ ದಾಖಲೆ ಕೂಡ ವೆಂಕಟೇಶ್ ಅಯ್ಯರ್ ಪಾಲಾಗಿದೆ. ಇದಕ್ಕೂ ಮುನ್ನ ಎಸ್ಆರ್ಹೆಚ್ ತಂಡದ ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ ವೆಂಕಿ ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸಿದ ಮೊದಲ ಕೆಕೆಆರ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ವೆಂಕಟೇಶ್ ಅಯ್ಯರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಶತಕ ಬಾರಿಸಿದ ಬ್ರೆಂಡನ್ ಮೆಕಲಂ ಆರ್ಸಿಬಿ ವಿರುದ್ಧ ಈ ಸಾಧನೆ ಮಾಡಿದ್ದರು.

ಕೆಕೆಆರ್ ಪರ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಕೂಡ ಈ ಪಂದ್ಯದ ಮೂಲಕ ವೆಂಕಟೇಶ್ ಅಯ್ಯರ್ ನಿರ್ಮಿಸಿದ್ದಾರೆ. ವೆಂಕಿ ಈ ಪಂದ್ಯದಲ್ಲಿ ಒಟ್ಟು 9 ಭರ್ಜರಿ ಸಿಕ್ಸ್ ಬಾರಿಸಿದ್ದರು. ಇನ್ನು ಕೆಕೆಆರ್ ಪರ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ್ದು ಬ್ರೆಂಡನ್ ಮೆಕಲಂ (13 ಸಿಕ್ಸ್).

ಇನ್ನು ಐಪಿಎಲ್ನಲ್ಲಿ ಸ್ಪೋಟಕ ಶತಕ ಸಿಡಿಸಿದ 8ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ವೆಂಕಟೇಶ್ ಅಯ್ಯರ್ ಪಾತ್ರರಾಗಿದ್ದಾರೆ. ಅಯ್ಯರ್ 49 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು 37 ಎಸೆತಗಳಲ್ಲಿ ಶತಕ ಬಾರಿಸಿದ ಯೂಸುಫ್ ಪಠಾಣ್.

ಒಟ್ಟಿನಲ್ಲಿ 15 ವರ್ಷಗಳ ಬಳಿಕ ಕೆಕೆಆರ್ ಪರ ಶತಕ ಸಿಡಿಸುವ ಮೂಲಕ ವೆಂಕಟೇಶ್ ಅಯ್ಯರ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.