- Kannada News Photo gallery Cricket photos Vijay Hazare Trophy: Historic 5 Centuries in Baroda vs Hyderabad List A Match
VHT 2025-26: ಒಂದೇ ಪಂದ್ಯದಲ್ಲಿ ಐದು ಶತಕಗಳು; ಐತಿಹಾಸಿಕ ದಾಖಲೆ ಸೃಷ್ಟಿ
Vijay Hazare Trophy: 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಮತ್ತು ಹೈದರಾಬಾದ್ ನಡುವಿನ ಪಂದ್ಯವು ಲಿಸ್ಟ್ ಎ ಕ್ರಿಕೆಟ್‌ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಒಟ್ಟು ಐವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಬರೋಡಾದ 3 ಮತ್ತು ಹೈದರಾಬಾದ್‌ನ 2 ಆಟಗಾರರು ಶತಕ ಸಿಡಿಸಿದರು. ಈ ಅದ್ಭುತ ಪ್ರದರ್ಶನವು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲಾಗಿದೆ.
Updated on: Jan 01, 2026 | 10:33 PM

2025-26ರ ವಿಜಯ್ ಹಜಾರೆ ಟ್ರೋಫಿ ದಾಖಲೆಯ ಪಂದ್ಯಕ್ಕೆ ಸಾಕ್ಷಿಯಾಗಿದೆ. ಈ ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹಿಂದೆಂದೂ ದಾಖಲಾಗದ ದಾಖಲೆಯೊಂದು ಸೃಷ್ಟಿಯಾಗಿದೆ. ಸನೋಸರಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬರೋಡಾ ಹಾಗೂ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳ ಒಟ್ಟು ಐವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದರು. ಇದರ ಫಲವಾಗಿ ಬರೋಡಾ ತಂಡ ಬರೋಬ್ಬರಿ 417 ರನ್ ಕಲೆಹಾಕಿತು. ಇತ್ತ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕದ ಗಡಿ ತಲುಪಿದರು. ಇದರರ್ಥ ಈ ಪಂದ್ಯದಲ್ಲಿ ಒಟ್ಟು ಐದು ಶತಕಗಳು ದಾಖಲಾಗಿದ್ದು, ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು.

ಬರೋಡಾ ಪರ ಅತ್ಯಧಿಕ ರನ್‌ಗಳ ಇನ್ನಿಂಗ್ಸ್ ಆಡಿದ ಆರಂಭಿಕ ನಿತ್ಯಾ ಪಾಂಡ್ಯ ಅವರು 100 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 122 ರನ್ ಕಲೆಹಾಕಿದರೆ, ಮತ್ತೊಬ್ಬ ಆರಂಭಿಕ ಅಮಿತ್ ಪಾಸಿ ಕೂಡ 93 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 127 ರನ್ ಗಳಿಸಿದರು. ಇವರಿಬ್ಬರು ಒಟ್ಟಾಗಿ ಮೊದಲ ವಿಕೆಟ್ಗೆ 230 ರನ್‌ಗಳ ಜೊತೆಯಾಟ ಕಟ್ಟಿದರು.

ಇವರಿಬ್ಬರ ನಂತರ ಬ್ಯಾಟಿಂಗ್ಗೆ ಬಂದ ತಂಡದ ನಾಯಕ ಕೃನಾಲ್ ಪಾಂಡ್ಯ ಕೂಡ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕೃನಾಲ್ 63 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಅಜೇಯ 109 ರನ್ ಗಳಿಸಿದರು. 173.03 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕಿದ ಕೃನಾಲ್ ಪಾಂಡ್ಯ ತಮ್ಮ ಲಿಸ್ಟ್ ಎ ವೃತ್ತಿಜೀವನದಲ್ಲಿ ಮೂರನೇ ಶತಕದ ಇನ್ನಿಂಗ್ಸ್ ಆಡಿದರು.

ಬರೋಡಾ ನೀಡಿದ ಗುರಿ ಬೆನ್ನಟ್ಟಿದ ಹೈದರಾಬಾದ್ ಪರ ಅಭಿರತ್ ರೆಡ್ಡಿ ಕೇವಲ 90 ಎಸೆತಗಳಲ್ಲಿ 18 ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿದಂತೆ 130 ರನ್ ಗಳಿಸಿದರು. ಹಾಗೆಯೇ ಪ್ರಜ್ಞಾಯ್ ರೆಡ್ಡಿ ಕೂಡ 98 ಎಸೆತಗಳಲ್ಲಿ 113 ರನ್ ಗಳಿಸಿದರು. ಆದಾಗ್ಯೂ, ಈ ಇಬ್ಬರು ಆಟಗಾರರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. 418 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 380 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
