
ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ 85 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಈ ಬಿರುಸಿನ ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ನತ್ತ ಮುಖ ಮಾಡಿದ ಕಿಂಗ್ ಕೊಹ್ಲಿ ಲಂಕಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 106 ಎಸೆತಗಳಲ್ಲಿ ಕೊಹ್ಲಿಯ ಸ್ಕೋರ್ 150 ರ ಗಡಿದಾಟಿತು. ಅಂತಿಮವಾಗಿ 110 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 13 ಫೋರ್ನೊಂದಿಗೆ ವಿರಾಟ್ ಕೊಹ್ಲಿ ಅಜೇಯ 166 ರನ್ ಬಾರಿಸಿದರು.

ವಿಶೇಷ ಎಂದರೆ ಇದು ವಿರಾಟ್ ಕೊಹ್ಲಿಯ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಈ ಸೆಂಚುರಿಗಳಲ್ಲಿ 4 ಶತಕಗಳು ಒಂದೇ ದಿನಾಂಕದಂದೇ ಮೂಡಿಬಂದಿರುವುದು ಮತ್ತೊಂದು ವಿಶೇಷ.

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಜನವರಿ 15 ರಂದು ಮೂರು ಶತಕಗಳನ್ನು ಬಾರಿಸಿದ್ದರು. 2017ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ 122 ರನ್ ಬಾರಿಸಿ ಅಬ್ಬರಿಸಿದ್ದರು.

2018ರ ಜನವರಿ 15 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 153 ರನ್ ಗಳಿಸಿದ್ದರು. ಹಾಗೆಯೇ 2019ರಲ್ಲಿಯೂ ಜನವರಿ 15ರಂದು ಆಸ್ಟ್ರೇಲಿಯಾ ವಿರುದ್ಧ 104 ರನ್ಗಳ ಶತಕ ಬಾರಿಸುವ ಮೂಲಕ ಕೊಹ್ಲಿ ಹೊಸ ವರ್ಷವನ್ನು ಆರಂಭಿಸಿದ್ದರು.

ಇದೀಗ ನಾಲ್ಕನೇ ಬಾರಿಗೆ ಜನವರಿ 15 ರಂದು ಶತಕ ಸಿಡಿಸಿ ವಿರಾಟ್ ಕೊಹ್ಲಿ 74ನೇ ಸೆಂಚುರಿಯನ್ನು ಪೂರೈಸಿದ್ದಾರೆ. ಅಷ್ಟೇ ಅಲ್ಲದೆ ಈ ಶತಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಸದ್ಯ 12754 ರನ್ ಬಾರಿಸಿ 5ನೇ ಸ್ಥಾನದಲ್ಲಿದ್ದರೆ, 18426 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.