
ಟೀಮ್ ಇಂಡಿಯಾದ (Team India) ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಆಂಗ್ಲರ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಆದರೆ ಎಲ್ಲೂ ಕೂಡ ಆ ವೈಯುಕ್ತಿಕ ಕಾರಣವೇನು? ಎಂಬುದು ಬಹಿರಂಗವಾಗಿರಲಿಲ್ಲ.

ಅತ್ತ ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಹೀಗಾಗಿಯೇ ಕೊಹ್ಲಿ ತಂಡದಿಂದ ಹೊರಗುಳಿಯಲು ಕಾರಣವೇನು? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳದಿರಲು ಅಸಲಿ ಕಾರಣವೇನು ಎಂಬುದನ್ನು ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.

ಯೂಟ್ಯೂಬ್ ಶೋನಲ್ಲಿ ಮಾತನಾಡಿದ ಎಬಿಡಿ, ವಿರಾಟ್ ಕೊಹ್ಲಿ ಚೆನ್ನಾಗಿಯೇ ಇದ್ದಾರೆ. ವಿರುಷ್ಕಾ ದಂಪತಿ ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

ನಿಜಕ್ಕೂ ಕೊಹ್ಲಿ ಗ್ರೇಟ್ ಮ್ಯಾನ್. ಅವರು ಕುಟುಂಬಕ್ಕೂ ಆದ್ಯತೆ ನೀಡುತ್ತಾರೆ. ಇದೇ ಕಾರಣದಿಂದಾಗಿ ಅವರು ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಕಿಂಗ್ ಕೊಹ್ಲಿಯ ಅತ್ಯಾಪ್ತರಾಗಿರುವ ಎಬಿಡಿ ತಿಳಿಸಿದ್ದಾರೆ.

ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಯಾಕೆ ಹೊರಗುಳಿದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಇದಾಗ್ಯೂ ಅವರು ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರಾ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಅತ್ತ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿರುವ ಕಾರಣ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಉಳಿದ 3 ಪಂದ್ಯಗಳಿಂದಲೂ ಹೊರಗುಳಿದರೂ ಅಚ್ಚರಿಪಡಬೇಕಿಲ್ಲ. ಹೀಗಾಗಿ ಈ ಸರಣಿಯಲ್ಲಿ ಕಿಂಗ್ ಕೊಹ್ಲಿಯ ಕಂಬ್ಯಾಕ್ ಅನ್ನು ನಿರೀಕ್ಷಿಸುವಂತಿಲ್ಲ.