- Kannada News Photo gallery Cricket photos Virat Kohli is all set to crush the coach Rahul Dravid's record in Test against South Africa
Virat Kohli: ಭಾರತ ತಂಡದ ಕೋಚ್ ದ್ರಾವಿಡ್ ದಾಖಲೆಯನ್ನೇ ಪುಡಿ ಮಾಡಲು ಸಜ್ಜಾದ ನಾಯಕ ವಿರಾಟ್ ಕೊಹ್ಲಿ
India Tour of SA: ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೊಸ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. ಅದಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಸಾಧನೆ ಹಿಂದಿಕ್ಕಿ ಎಂಬುದು ವಿಶೇಷ.
Updated on: Dec 20, 2021 | 12:10 PM

ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ಗೆ ಭಾರತ ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಫ್ರಿಕಾ ಪಿಚ್ನ ಮರ್ಮವನ್ನು ತಿಳಿಯಲು ವಿರಾಟ್ ಕೊಹ್ಲಿ ಪಡೆ ನೆಟ್ನಲ್ಲಿ ಬೆವರು ಹರಿಸುತ್ತಿದೆ. ಡಿಸೆಂಬರ್ 26 ರಂದು ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಸರಣಿಗೆ ಚಾಲನೆ ಸಿಗಲಿದೆ.

ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಹೀಗಾಗಿ ಭಾರತ ತಂಡಕ್ಕೆ ಈ ಸರಣಿ ಮುಖ್ಯವಾಗಿದೆ. ಅಲ್ಲದೆ ಹರಿಣಗಳ ನೆಲದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಕೂಡ ಇದೆ.

ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. ಅದಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಸಾಧನೆ ಹಿಂದಿಕ್ಕಿ ಎಂಬುದು ವಿಶೇಷ. ಹಾಗಾದ್ರೆ ವಿರಾಟ್ ಮಾಡಲಿರುವ ಆ ದಾಖಲೆ ಯಾವುದು?

ದಕ್ಷಿಣ ಆಫ್ರಿಕಾ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಈವರೆಗೆ 59.72 ಸರಾಸರಿಯಲ್ಲಿ 1075 ರನ್ ಕಲೆಹಾಕಿದ್ದಾರೆ. ಕೊಹ್ಲಿಗಿಂತ ಅಧಿಕವಾಗಿ ಮೂರು ಭಾರತೀಯ ಬ್ಯಾಟರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 1741 ರನ್, ವಿರೇಂದ್ರ ಸೆಹ್ವಾಗ್ 1306 ರನ್ ಮತ್ತು ರಾಹುಲ್ ದ್ರಾವಿಡ್ 1252 ರನ್ ಕಲೆಹಾಕಿದ್ದಾರೆ.

ದ. ಆಫ್ರಿಕಾ ವಿರುದ್ಧ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ಕೊಹ್ಲಿ 232 ರನ್ ಬಾರಿಸಿದರೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿ ಎರಡನೇ ಸ್ಥಾನಕ್ಕೇರಲಿದ್ದಾರೆ.

ಇನ್ನು ಕೊಹ್ಲಿ ಜೊತೆ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಅತ್ಯಂತ ಮಹತ್ವದ ಸರಣಿಯಾಗಿದೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ತಾಯ್ನಾಡಿನಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಸರಣಿಯನ್ನು ಗೆದ್ದಾಗಿದೆ. ಈಗ ನೂತನ ಕೋಚ್ ಅಡಿ ವಿದೇಶದಲ್ಲಿ ಮೊದಲ ಸರಣಿಯನ್ನಾಡುತ್ತಿದ್ದು, ಭಾರತ ತಂಡಕ್ಕೆ ಯಶಸ್ಸು ತಂದುಕೊಡುವ ಜವಾಬ್ದಾರಿ ದ್ರಾವಿಡ್ ಮೇಲಿದೆ.

ವಿಶೇಷ ಎಂದರೆ ಭಾರತ ತಂಡ ಈವರೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಕೇವಲ ಮೂರು ಪಂದ್ಯ ಮಾತ್ರವೇ ಗೆದ್ದಿದೆ. ಕಳೆದ ಬಾರಿ 2018ರಲ್ಲಿ ಹರಿಣಗಳ ನಾಡಿಗೆ ದಂಡೆತ್ತಿ ಹೋಗಿ 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿದೆ. ಆದರೆ, ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕಿಳಿಯುತ್ತಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ಆರಂಭದಲ್ಲಿ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26ರಂದು ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಕದಿನ ಹಾಗೂ ಟ್ವೆಂಟಿ-20 ತಂಡದ ನಾಯಕ ರೋಹಿತ್ ಶರ್ಮಾ, ಸ್ನಾಯು ಸೆಳೆತಕ್ಕೊಳಗಾಗಿದ್ದರಿಂದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ.



















