ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮುಟ್ಟದೆ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಅವರ ಕ್ಯಾಚ್ ಹಿಡಿಯುವ ಮೂಲಕ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದು, ಇದೀಗ ಅತಿ ಹೆಚ್ಚು ಅಂತರರಾಷ್ಟ್ರೀಯ ಕ್ಯಾಚ್‌ಗಳನ್ನು ಹಿಡಿದ ಭಾರತೀಯ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ವಿರಾಟ್ ಈಗ ಎಲ್ಲಾ ಸ್ವರೂಪಗಳಲ್ಲಿ 335* ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಈ ಮೂಲಕ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಹಿಡದ ಫೀಲ್ಡರ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ವಿರಾಟ್, ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ತಮ್ಮ 549ನೇ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇತ್ತೀಚೆಗೆ, ವಿರಾಟ್ ಏಕದಿನ ಪಂದ್ಯಗಳಲ್ಲಿ ಭಾರತ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ ಅವರು ಎಲ್ಲಾ ಸ್ವರೂಪಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಗೋಡೆ ಖ್ಯಾತಿಯ ದ್ರಾವಿಡ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 504 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಒಟ್ಟು 334 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇಲ್ಲಿಯವರೆಗೆ ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದ್ದ ರಾಹುಲ್ ದ್ರಾವಿಡ್ ಇದೀಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 301 ನೇ ಏಕದಿನ ಪಂದ್ಯವನ್ನು ಆಡುತ್ತಿದ್ದು, ಈ ವಿಷಯದಲ್ಲಿ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಯುವರಾಜ್ ಕೂಡ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಿದ್ದರು. ಈ ಸ್ವರೂಪದಲ್ಲಿ ವಿರಾಟ್ 159* ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇತ್ತೀಚೆಗೆ, ಅವರು ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ (156) ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುರಿದರು.
ಇನ್ನು ಟೆಸ್ಟ್ ಕ್ರಿಕೆಟ್ ಬಗ್ಗೆ ಹೇಳುವುದಾದರೆ, ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ 123 ಪಂದ್ಯಗಳನ್ನು ಆಡಿದ್ದು, ಒಟ್ಟು 210 ಇನ್ನಿಂಗ್ಸ್‌ಗಳಲ್ಲಿ 121 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇದಲ್ಲದೆ, ಕೊಹ್ಲಿ 125 ಟಿ20 ಅಂತರರಾಷ್ಟ್ರೀಯ ಪಂದ್ಯಗಳ 117 ಇನ್ನಿಂಗ್ಸ್‌ಗಳಲ್ಲಿ 54 ಕ್ಯಾಚ್‌ಗಳನ್ನು ಹಿಡಿದಿದ್ದರು.