
ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಭಾರತ ತಂಡವನ್ನು ಪ್ರಕಟ ಮಾಡಿದೆ. ಅಚ್ಚರಿ ಎಂದರೆ ಇದರಲ್ಲಿ ಕೂಡ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಹೆಸರಿಲ್ಲ. ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ನಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಇಡೀ 5 ಪಂದ್ಯಗಳ ಸರಣಿಯಿಂದ ಕೊಹ್ಲಿ ಹಿಂದೆ ಸರಿದಿದ್ದರಿಂದ ಇದ್ದಕ್ಕಿದ್ದಂತೆ ಏನಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಮಾರ್ಚ್ 11 ರ ವರೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯಲಿದೆ. ಅಲ್ಲಿಯವರೆಗೆ ಇವರು ಯಾವುದೇ ಪಂದ್ಯ ಆಡುತ್ತಿಲ್ಲ.

ಮೊದಲ ಎರಡು ಟೆಸ್ಟ್ಗಳಿಂದ ಜನವರಿ 22 ರಂದು ವಿರಾಟ್ ಕೊಹ್ಲಿ ತಮ್ಮ ಹೆಸರನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಂಡಳಿ, ನಾಯಕ ಮತ್ತು ಕೋಚ್‌ನೊಂದಿಗೆ ಮಾತನಾಡಿದ್ದರು. ಕೆಲವು ಕಾರಣದಿಂದ ಕೊಹ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರುವುದು ಅಗತ್ಯ ಎಂದು ಹೇಳಿದ್ದಾರೆ. ಹೀಗಾಗಿ ಅವರು ಎರಡು ಟೆಸ್ಟ್ನಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೊದಲಿಗೆ ತಿಳಿಸಿತ್ತು.

ಕೊಹ್ಲಿ ಅಲಭ್ಯತೆ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಬರುತ್ತಿದ್ದರೂ ಸತ್ಯ ಹೊರಬಿದ್ದಿಲ್ಲ. ಈ ಬಗ್ಗೆ ಕೊಹ್ಲಿ ಅಥವಾ ಅವರ ಪತ್ನಿ ಅನುಷ್ಕಾ ಯಾವುದೇ ಮಾಹಿತಿ ನೀಡಿಲ್ಲ. ಕೊಹ್ಲಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿ ಇತ್ತು, ಆದರೆ ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಇದು ಸುಳ್ಳು ಎಂದಿದ್ದರು.

ಇದರ ನಡುವೆ ವಿರಾಟ್ ಎರಡನೇ ಬಾರಿಗೆ ತಂದೆಯಾಗುತ್ತಾರೆ ಎಂಬ ಸುದ್ದಿ ಕೂಡ ಇದೆ. ಡಿವಿಲಿಯರ್ಸ್ ಕೂಡ ಈ ಹೇಳಿಕೆ ನೀಡಿದ್ದರು. ಆದರೆ ನಂತರ ಸ್ವತಃ ಎಬಿಡಿ ಇದು ಸುಳ್ಳು ಎಂದು ಕ್ಷಮೆಯಾಚಿಸಿದರು. ವಿರಾಟ್ ಸ್ವತಃ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಚಿಕಿತ್ಸೆ ಪಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇದಕ್ಕೆಲ್ಲ ಸ್ವತಃ ಕೊಹ್ಲಿಯೇ ಉತ್ತರಿಸಬೇಕಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ರಾಜ್ಕೋಟ್ನಲ್ಲಿ ಫೆಬ್ರವರಿ 15 ರಿಂದ 19 ವರೆಗೆ ನಡೆಯಲಿದೆ. ಬಳಿಕ ನಾಲ್ಕನೇ ಟೆಸ್ಟ್ ರಾಂಚಿಯಲ್ಲಿ ಫೆಬ್ರವರಿ 23 ರಿಂದ 27 ವರೆಗೆ ಆಯೋಜಿಸಲಾಗಿದೆ. ಕೊನೆಯ ಹಾಗೂ ಅಂತಿಮ ಟೆಸ್ಟ್ ಮ್ಯಾಚ್ ಮಾರ್ಚ್ 7 ರಿಂದ 11 ವರೆಗೆ ಧರ್ಮಶಾಲಾದಲ್ಲಿ ಏರ್ಪಡಿಸಲಾಗಿದೆ.