IPL 2024: 20 ಲಕ್ಷಕ್ಕೆ ಯಾರೂ ಖರೀದಿಸಿಲ್ಲ: ಈಗ ಕೋಟಿಗೆ ಎಂಟ್ರಿ..!
IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಯುವ ವೇಗದ ಬೌಲರ್ ಶಮರ್ ಜೋಸೆಫ್ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲು ಸಹಿ ಹಾಕಿದ್ದಾರೆ. ಅದರಂತೆ ಐಪಿಎಲ್ 2024 ರಲ್ಲಿ (IPL) ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಬದಲಿಗೆ ಶಮರ್ ಕಣಕ್ಕಿಳಿಯುವುದು ಖಚಿತವಾಗಿದೆ.
Updated on:Feb 14, 2024 | 3:05 PM

ವೆಸ್ಟ್ ಇಂಡೀಸ್ ತಂಡದ ಯುವ ವೇಗಿ ಶಮರ್ ಜೋಸೆಫ್ (Shamar Joseph) ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮಾರ್ಕ್ ವುಡ್ ಗಾಯಗೊಂಡು ಐಪಿಎಲ್ನಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿಗೆ ಶಮರ್ ಜೋಸೆಫ್ ಆಯ್ಕೆಯಾಗಿದ್ದಾರೆ.

ಶಮರ್ ಜೋಸೆಫ್ ಐಪಿಎಲ್ಗೆ ಎಂಟ್ರಿ ಕೊಡುತ್ತಿರುವುದು ಬರೋಬ್ಬರಿ 3 ಕೋಟಿ ರೂ.ಗೆ ಎಂಬುದು ವಿಶೇಷ. ಅಂದರೆ ಈ ಬಾರಿಯ ಹರಾಜಿನಲ್ಲಿ ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಶಮರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಆದರೆ ಯಾವಾಗ ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಟೆಸ್ಟ್ನಲ್ಲಿ ಶಮರ್ 7 ವಿಕೆಟ್ ಕಬಳಿಸಿ ಮಿಂಚಿದ್ದರೋ ಅಲ್ಲಿಂದ ಹೊಸ ಸೆನ್ಸೇಷನ್ ಶುರುವಾಗಿತ್ತು. ಇದರ ಬೆನ್ನಲ್ಲೇ ಶಮರ್ ಜೋಸೆಫ್ಗೆ ಐಪಿಎಲ್ನಲ್ಲೂ ಅವಕಾಶ ಸಿಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಸುದ್ದಿ ನಿಜವಾಗಿದೆ.

ವಿಂಡೀಸ್ ವೇಗಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಬರೋಬ್ಬರಿ 3 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಮಾರ್ಕ್ ವುಡ್ ಅವರ ಬದಲಿ ಆಟಗಾರರನ್ನಾಗಿ ಹೆಸರಿಸಿದೆ. ಇದರೊಂದಿಗೆ ಕೆಎಲ್ ರಾಹುಲ್ ನಾಯಕತ್ವದಲ್ಲಿ 24 ವರ್ಷದ ವೆಸ್ಟ್ ಇಂಡೀಸ್ನ ಘಾತಕ ವೇಗಿ ಕಣಕ್ಕಿಳಿಯುವುದು ಕೂಡ ಖಚಿತವಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ದೇವದತ್ ಪಡಿಕ್ಕಲ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುಧ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ಕೆ.ಗೌತಮ್. ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ. ಸಿದ್ಧಾರ್ಥ್, ಆಷ್ಟನ್ ಟರ್ನರ್, ಡೇವಿಡ್ ವಿಲ್ಲಿ, ಮೊಹಮ್ಮದ್ ಅರ್ಷದ್ ಖಾನ್, ಶಮರ್ ಜೋಸೆಫ್.
Published On - 7:38 am, Sun, 11 February 24
