ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ವಿರಾಟ್ ಕೊಹ್ಲಿ (Virat Kohli) ಹೊರಗುಳಿದಿದ್ದಾರೆ. ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ಕೊಹ್ಲಿ ಇದೀಗ ಉಳಿದಿರುವ 3 ಪಂದ್ಯಗಳಿಂದ ಕೂಡ ಹಿಂದೆ ಸರಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಅವರು ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯದ ಉತ್ತರ ಜೂನ್ ಮೊದಲ ವಾರದಲ್ಲಿ. ಅಂದರೆ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ಜೂನ್ ತಿಂಗಳವರೆಗೆ ಕಾಯಲೇಬೇಕು.
ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಮಾರ್ಚ್ 11 ಕ್ಕೆ ಮುಗಿಯಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಯಾವುದೇ ಪಂದ್ಯವಾಡುತ್ತಿಲ್ಲ. ಬದಲಾಗಿ ಭಾರತ ತಂಡದ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ಇದರ ಬೆನ್ನಲ್ಲೇ ಐಪಿಎಲ್ ಕೂಡ ಶುರುವಾಗಲಿದೆ.
ಅಂದರೆ ವಿರಾಟ್ ಕೊಹ್ಲಿ ಐಪಿಎಲ್ ಮೂಲಕ ರಿಎಂಟ್ರಿ ಕೊಡಲಿದ್ದಾರೆ. ಈ ಬಾರಿಯ ಐಪಿಎಲ್ ಮಾರ್ಚ್ 22 ರಿಂದ ಶುರುವಾಗುವ ಸಾಧ್ಯತೆಯಿದೆ. ಅದರಂತೆ ಆರ್ಸಿಬಿ ಪರ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಜೂನ್ 1 ರಿಂದ ಟಿ20 ವಿಶ್ವಕಪ್ ಶುರುವಾಗಲಿದೆ. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದರೆ ವಿರಾಟ್ ಕೊಹ್ಲಿಯನ್ನು ಮತ್ತೆ ಮೈದಾನದಲ್ಲಿ ನೋಡಲು ಐಪಿಎಲ್ವರೆಗೆ ಕಾಯಲೇಬೇಕು. ಹಾಗೆಯೇ ಟೀಮ್ ಇಂಡಿಯಾ ಪರ ಅವರು ಆಡುವುದನ್ನು ಎದುರು ನೋಡಲು ಟಿ20 ವಿಶ್ವಕಪ್ ಶುರುವಾಗಬೇಕಿದೆ.
Published On - 9:53 am, Sun, 11 February 24