Updated on: Dec 08, 2021 | 10:22 PM
4 ವರ್ಷಗಳ ಹಿಂದೆ 2017 ರಲ್ಲಿ ವಿರಾಟ್ ಕೊಹ್ಲಿ ಕೈಯಲ್ಲಿ ಎಂಎಸ್ ಧೋನಿ ಏಕದಿನ ತಂಡದ ನಾಯಕತ್ವವನ್ನು ನೀಡಿದ್ದರು. ವಿರಾಟ್ ಕೊಹ್ಲಿ ಅವರು ನಾಯಕನಾದ ತಕ್ಷಣ ಅದ್ಭುತಗಳನ್ನು ಮಾಡಿ ಟೀಮ್ ಇಂಡಿಯಾವನ್ನು ಬೇರೆ ಹಂತಕ್ಕೆ ಕೊಂಡೊಯ್ದರು. ಇದೀಗ ಕೊಹ್ಲಿಯ ಆ ವಿರಾಟ್ ಪಯಣ ಅಂತ್ಯಗೊಂಡಿದೆ. ಟ್ವೆಂಟಿ-20 ನಂತರ ವಿರಾಟ್ ಕೊಹ್ಲಿ ಇನ್ನು ಮುಂದೆ ಏಕದಿನ ತಂಡದ ನಾಯಕರಾಗಿರುವುದಿಲ್ಲ. ಅವರ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಲಾಗಿದೆ. ನಾಯಕನಾಗಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಹಲವು ಮೈಲುಗಲ್ಲುಗಳನ್ನು ಸಾಧಿಸಿದ್ದಾರೆ, ಕಳೆದ ನಾಲ್ಕು ವರ್ಷಗಳಲ್ಲಿ ಕಿಂಗ್ ಕೊಹ್ಲಿ ಏನು ಸಾಧಿಸಿದ್ದಾರೆಂಬುದು ಇಲ್ಲಿದೆ.
ವಿರಾಟ್ ಕೊಹ್ಲಿಯ ODI ನಾಯಕತ್ವದ ದಾಖಲೆ ಅತ್ಯುತ್ತಮವಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಟೀಂ ಇಂಡಿಯಾ 95 ಪಂದ್ಯಗಳಲ್ಲಿ 65 ಪಂದ್ಯಗಳನ್ನು ಗೆದ್ದಿದೆ ಮತ್ತು ತಂಡವು ಕೇವಲ 27 ರಲ್ಲಿ ಸೋಲನುಭವಿಸಿದೆ. ವಿರಾಟ್ ಕೊಹ್ಲಿಯ ಗೆಲುವಿನ ಶೇಕಡಾವಾರು ಶೇಕಡಾ 68 ಆಗಿತ್ತು, ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮವಾಗಿದೆ.
ಗೆಲುವಿನ ಶೇಕಡಾವಾರು ಲೆಕ್ಕದಲ್ಲಿ ವಿರಾಟ್ ಕೊಹ್ಲಿ ವಿಶ್ವದ ನಾಲ್ಕನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ಲೈವ್ ಲಾಯ್ಡ್ ಶೇಕಡಾ 77.71 ಪಂದ್ಯಗಳನ್ನು ಗೆದ್ದರೆ, ರಿಕಿ ಪಾಂಟಿಂಗ್ 76.14 ಶೇಕಡಾದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹ್ಯಾನ್ಸಿ ಕ್ರೋನಿಯೆ 73.70 ಪಂದ್ಯಗಳನ್ನು ಗೆದ್ದು 3ನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತವು 19 ದ್ವಿಪಕ್ಷೀಯ ಸರಣಿಗಳಲ್ಲಿ 15 ರಲ್ಲಿ ಗೆದ್ದಿದೆ ಮತ್ತು ಕೇವಲ 4 ರಲ್ಲಿ ಸೋತಿದೆ. ವಿರಾಟ್ ಕೊಹ್ಲಿ ತವರು ನೆಲದಲ್ಲಿ 9 ದ್ವಿಪಕ್ಷೀಯ ಸರಣಿಗಳಲ್ಲಿ 8 ರಲ್ಲಿ ಗೆದ್ದಿದ್ದಾರೆ. ಏಕದಿನ ನಾಯಕನಾಗಿ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿಯೂ ಭಾರತವನ್ನು ಯಶಸ್ವಿಗೊಳಿಸಿದರು. ಅವರು ಆಸ್ಟ್ರೇಲಿಯಾದಲ್ಲಿ ಭಾರತವನ್ನು 2-1 ODI ಸರಣಿಯನ್ನು ಗೆಲ್ಲುವಂತೆ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ 5-1 ಅಂತರದ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಏಕದಿನ ಸರಣಿಯನ್ನೂ ಭಾರತ 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಜಿಂಬಾಬ್ವೆಯಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ.
ನಾಯಕನಾಗಿ ವಿರಾಟ್ ಕೊಹ್ಲಿ ಅವರ ODI ದಾಖಲೆಯೂ ಅದ್ಭುತವಾಗಿದೆ. ವಿರಾಟ್ ಕೊಹ್ಲಿ 95 ಪಂದ್ಯಗಳಲ್ಲಿ 21 ಶತಕ ಮತ್ತು 27 ಅರ್ಧ ಶತಕ ಸೇರಿದಂತೆ 72.65 ರ ಸರಿಸಾಟಿಯಿಲ್ಲದ ಸರಾಸರಿಯಲ್ಲಿ 5449 ರನ್ ಗಳಿಸಿದ್ದಾರೆ. ಏಕದಿನ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿ ಉಳಿದರು. ರಿಕಿ ಪಾಂಟಿಂಗ್ 22 ಏಕದಿನ ಶತಕಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ.