Updated on: Apr 20, 2023 | 10:29 PM
IPL 2023 PBKS vs RCB: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಮತ್ತೆ ಆರ್ಸಿಬಿ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಪಕ್ಕೆಲುಬಿನ ನೋವಿನಿಂದ ಬಳಲುತ್ತಿರುವ ಫಾಫ್ ಡುಪ್ಲೆಸಿಸ್ ಈ ಪಂದ್ಯದ ಫೀಲ್ಡಿಂಗ್ನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಹೀಗಾಗಿ ಫಾಫ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಆಯ್ಕೆ ಮಾಡಿ, ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು.
ಅದರಂತೆ ಮತ್ತೆ ಆರ್ಸಿಬಿ ತಂಡದ ನಾಯಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕಿಂಗ್ ಕೊಹ್ಲಿ 47 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 59 ರನ್ ಬಾರಿಸಿದ್ದರು.
ಈ 59 ರನ್ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ 6500 ರನ್ ಕಲೆಹಾಕಿದ ವಿಶೇಷ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡರು. ವಿರಾಟ್ ಕೊಹ್ಲಿ ಆರ್ಸಿಬಿ ಪರ ನಾಯಕರಾಗಿ 5333 ರನ್ಳಿಸಿದರೆ, ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ ಆಗಿ 50 ಪಂದ್ಯಗಳಲ್ಲಿ 1570 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ 6500 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ 5 ಫೋರ್ಗಳನ್ನು ಬಾರಿಸುವ ಮೂಲಕ ಐಪಿಎಲ್ನಲ್ಲಿ 600 ಫೋರ್ ಬಾರಿಸಿದ ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದು, ಒಟ್ಟು 730 ಫೋರ್ ಬಾರಿಸಿದ್ದಾರೆ. ಇದೀಗ 603 ಫೋರ್ ಸಿಡಿಸುವ ಮೂಲಕ ಆರ್ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ಪೂರೈಸುವುದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಹಾಫ್ ಸೆಂಚುರಿ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಡೇವಿಡ್ ವಾರ್ನರ್ ಇದ್ದು, ಆಸ್ಟ್ರೇಲಿಯಾ ಆಟಗಾರ 96 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ 366 ಟಿ20 ಇನಿಂಗ್ಸ್ಗಳ ಮೂಲಕ ಒಟ್ಟು 89 ಅರ್ಧಶತಕಗಳನ್ನು ಬಾರಿಸಿ ಹಾಫ್ ಸೆಂಚುರಿ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 30 ಪ್ಲಸ್ ಸ್ಕೋರ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 100 ಬಾರಿ 30 ಕ್ಕಿಂತ ಹೆಚ್ಚಿನ ರನ್ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.